ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದ ಸಮೀಪ ಹೆದ್ದಾರಿಯ ಅರಕಲಗೂಡು ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯಿಂದ ವೈದ್ಯರು, ಸಿಬ್ಬಂದಿ, ರೋಗಿಗಳು ಹಾಗೂ ತುರ್ತು ಚಿಕಿತ್ಸೆ ವಾಹನಗಳ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಅಗತ್ಯ ಪೊಲೀಸ್ ಬಂದೋಬಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸಂತೆಯ ದಿನವಾದ್ದರಿಂದ ಗ್ರಾಮೀಣ ಜನರು ಕೃಷಿ ಕಾರ್ಯಗಳಿಗೆ ಬಿಡುವು ನೀಡಿ, ವೈದ್ಯರು, ಕಚೇರಿಗಳು ಹಾಗೂ ವೈಯಕ್ತಿಕ ಕೆಲಸಗಳಿಗೆ ಆಗಮಿಸುವ ಕಾರಣದಿಂದ ಹೆಚ್ಚಿನ ವಾಹನಗಳ ಸಂಚಾರ ಜತೆಗೆ ಜನದಟ್ಟಣೆ ಹೆಚ್ಚಿರುತ್ತದೆ. ಡಾ. ಅಂಬೇಡ್ಕರ್ ವೃತ್ತ ಸಮೀಪ ಹೆದ್ದಾರಿಯು ಅರಕಲಗೂಡು ತಾಲೂಕು ಹಾಗೂ ಕೊಡಗು ಜಿಲ್ಲೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಜತೆಗೆ ಎರಡು ಬದಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇರುವುದರಿಂದ ಎರಡು ಆಸ್ಪತ್ರೆಗಳಿಗೂ ಓಡಾಟ ಹೆಚ್ಚಿರುವ ಕಾರಣ ತುರ್ತು ಸಂದರ್ಭಗಳಲ್ಲಿ ವೈದ್ಯರು, ಸಿಬ್ಬಂದಿ, ರೋಗಿಗಳು ಹಾಗೂ ರೋಗಿಗಳ ಜತೆ ಬಂದವರು ಅನುಭವಿಸುವ ಮಾನಸಿಕ ಹಿಂಸೆ ತಿಳಿಸಲು ಅಸಾಧ್ಯ. ಇದರ ನಡುವೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೇಟಿನಲ್ಲಿ ಓಡಾಡಲು ಆಗದಂತೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ನಿಲುಗಡೆ ಮಾಡಲಾಗುತ್ತಿದೆ. ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ರೋಗಿಗಳನ್ನು ವಾಹನಗಳಿಂದ ಇಳಿಸಲು ವಾಹನಗಳನ್ನು ನಿಲ್ಲಿಸಿದಾಗ ಮಾನವೀಯ ದೃಷ್ಠಿಯಿಂದ ಕ್ಷಮಿಸಬಹುದು. ಆದರೆ ವಾಹನಗಳನ್ನು ನಿಲ್ಲಿಸಿ, ತೆರಳುವ ಮಾಲೀಕರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಲ್ಲಿ ಗೃಹ ರಕ್ಷಕ ದಳದವರ ಸೇವಾ ನ್ಯೂನತೆಯಿಂದ ಸಮಸ್ಯೆ ಉಲ್ಪಣಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.