ಕಚೇರಿಗೆ ಜನರ ಅಲೆದಾಟ ತಪ್ಪಿಸಿ: ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಸತೀಶ ಚಿಟಗುಬ್ಬಿ

KannadaprabhaNewsNetwork |  
Published : Mar 13, 2025, 12:50 AM IST
೧೨ವೈಎಲ್‌ಬಿ೧:ಯಲಬುರ್ಗಾದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ  ತಾಲೂಕಾ ಮಟ್ಟದ ಸಾರ್ವಜನಿಕ ಕುಂದು ಕೊರತೆ, ಅಹವಾಲು ಸಭೆಯಲ್ಲಿ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಸತೀಶ ಚಿಟಗುಬ್ಬಿ ಮಾತನಾಡಿದರು. | Kannada Prabha

ಸಾರಾಂಶ

ಕಚೇರಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೇ ಲೋಕಾಯುಕ್ತದ ಗಮನಕ್ಕೆ ತನ್ನಿ. ನಿಮ್ಮ ಹೆಸರನ್ನು ಗೌಪ್ಯವಾಗಿಟ್ಟು ತಪ್ಪಿಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.

ಯಲಬುರ್ಗಾ:

ಜನರು ಕೆಲಸ-ಕಾರ್ಯಗಳಿಗೆ ನಿತ್ಯ ಕಚೇರಿಗಳಿಗೆ ಅಲೆಯದಂತೆ ಅಧಿಕಾರಿಗಳು ಪಾರದರ್ಶಕ ಹಾಗೂ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ರಾಯಚೂರ, ಕೊಪ್ಪಳ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಸತೀಶ ಚಿಟಗುಬ್ಬಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕರ ಕುಂದು-ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಚೇರಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೇ ಲೋಕಾಯುಕ್ತದ ಗಮನಕ್ಕೆ ತನ್ನಿ. ನಿಮ್ಮ ಹೆಸರನ್ನು ಗೌಪ್ಯವಾಗಿಟ್ಟು ತಪ್ಪಿಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜನರಿಗೆ ಭರವಸೆ ನೀಡಿದರು.

ಪಿಡಿಒಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಒಳಪಡುವ ಗಾಂವಠಾಣ (ಸರ್ಕಾರಿ) ಜಾಗ ಗುರುತಿಸಿ ಅದನ್ನು ಹದ್ದುಬಸ್ತ್‌ ಮಾಡಿ ನೋಂದಾಯಿಸಿಕೊಳ್ಳಬೇಕು. ಈ ಜಾಗವನ್ನು ಯಾರು ಅಕ್ರಮವಾಗಿ ಪಡೆಯದಂತೆ ಗಮನಹರಿಸಬೇಕು. ಜತೆಗೆ ಅಂತಹವರ ವಿರುದ್ಧ ಕಾನೂನಿನ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ಅಧಿಕಾರಿಗಳು ಜನರ ಕೆಲಸವನ್ನು ನಿಮ್ಮ ವ್ಯಾಪ್ತಿಯಲ್ಲಿ ಬಂದರೆ ಮಾಡಿಕೊಡಿ. ಇಲ್ಲದಿದ್ದರೆ ಮೇಲಾಧಿಕಾರಿಗಳ ಹತ್ತಿರ ಕಳುಹಿಸಿ. ಅದು ಆಗದಿದ್ದರೆ ಅವರಿಗೆ ಹಿಂಬರಹ ಕೊಡಿ. ಇಲ್ಲದಿದ್ದರೆ ಅವರು ಲೋಕಾಯುಕ್ತಕ್ಕೆ ಬಂದು ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಅವಕಾಶ ನೀಡದೆ ನಿಮ್ಮ ವ್ಯಾಪ್ತಿಯಲ್ಲೇ ಸಮಸ್ಯೆ ಇತ್ಯರ್ಥಪಡಿಸಬೇಕು. ಎಲ್ಲ ಇಲಾಖೆಗಳಲ್ಲಿ ಲೋಕಾಯುಕ್ತರ ದೂರವಾಣಿ ಕಡ್ಡಾಯವಾಗಿ ಬರೆಯಿಸಿ ಜನರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

ದೂರು:

ಯಲಬುರ್ಗಾ ಪಪಂ ಆಶ್ರಯ ಸಮಿತಿ ನಾಮನಿದೇರ್ಶನ ಸದಸ್ಯ ಸಿದ್ದಪ್ಪ ಕಟ್ಟಿಮನಿ ತಹಸ್ಹೀಲ್ ಕಚೇರಿಯಲ್ಲಿ ಅಬ್ದುಲ್ ರಹಿಮಾನ ರೆವಡಿವಾಲೆ ದ್ವಿತೀಯ ದರ್ಜೆ ಸಹಾಯಕನ ವಿರುದ್ಧ ಅರ್ಜಿ ಸಲ್ಲಿಸಿ, ೨೦೦೭ರಿಂದ ಈ ವರೆಗೂ ಒಂದೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನಿಯಮಾವಳಿ ಪ್ರಕಾರ ಸಿ ದರ್ಜೆ ನೌಕರ ೪ ವರ್ಷ ಮಾತ್ರ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕು ಎಂಬ ನಿಯಮಾವಳಿ ಇದೆ. ಇನ್ನೂ ೨೦೨೦ರಲ್ಲಿ ದೇವಸ್ಥಾನ ದಸ್ತಿಕರಣ ಹಾಗೂ ನೈಸರ್ಗಿಕ ವಿಕೋಪದಿಂದ ಪರಿಹಾರ ₹ ೨೭,೭೮ ಲಕ್ಷವನ್ನು ವಿಷಯ ನಿರ್ವಾಹಕರ ಸಮ್ಮುಖದಲ್ಲಿ ರಹಿಮಾನ ಸೇರಿ ಇತರರು ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಎಫ್‌ಐಆರ್ ಸಹ ದಾಖಲಾಗಿದೆ. ಎನ್‌ಜಿಒ ಪೂಜ್ಯಾಯ ಸರ್ವಿಸ್ ಸೆಂಟರ್ ತಹಸ್ಹೀಲ್ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್‌ಗಳನ್ನು ಸಹ ತಾವು ಕೇಳಿದಷ್ಟು ಹಣ ನೀಡದವರನ್ನು ನೇಮಕ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಇತ್ಯರ್ಥಿಪಡಿಸುವುದಾಗಿ ಲೋಕಾಯುಕ್ತರು ಭರವಸೆ ನೀಡಿದರು. ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ ಸಂಬಂಧಿಸಿದ ಒಟ್ಟು ೧೨ಕ್ಕೂ ಹೆಚ್ಚು ಕುಂದು-ಕೊರತೆಗಳ ಅರ್ಜಿಗಳನ್ನು ಜನರು ಲೋಕಾಯುಕ್ತರಿಗೆ ಸಲ್ಲಿಸಿದರು.

ಈ ವೇಳೆ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಚಂದ್ರಪ್ಪ ಇಡಿ, ಇನ್‌ಸ್ಪೆಕ್ಟರ್‌ಗಳಾದ ಸುನೀಲ್ ಮೇಗಳಮನಿ, ಶೈಲಾ ಪ್ಯಾಟಿಶೆಟ್ಟರ, ತಹಸ್ಹೀಲ್ದಾರ್‌ಗಳಾದ ಬಸವರಾಜ ತೆನ್ನಳ್ಳಿ, ಪ್ರಾಣೇಶ ಎಚ್., ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!