ಹುಬ್ಬಳ್ಳಿ: ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ಅವ್ವ ಸೇವಾ ಟ್ರಸ್ಟ್ ವತಿಯಿಂದ ಡಿ. 15ರಂದು ಬೆಳಗ್ಗೆ 10.30ಕ್ಕೆ 12 ಸಾಧಕರಿಗೆ ಅವ್ವ ಪ್ರಶಸ್ತಿ-2024 ಪ್ರದಾನ ಮಾಡಲಾಗುವುದು. ಇಲ್ಲಿನ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 12 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.ಹಿರಿಯ ರಾಜಕಾರಣಿ ಎಸ್.ಆರ್. ಪಾಟೀಲ, ಪತ್ರಕರ್ತ ಚಂದ್ರಕಾಂತ ವಡ್ಡು, ಸಿತಾರ ವಾದಕ ಛೋಟೆ ರಹಮತ್ ಖಾನ್, ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಭಾಗವತ ಕೇಶವ ಹೆಗಡೆ ಕೊಳಗಿ, ಉದ್ಯಮಿ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇಟಿಂಗ್ ಕ್ರೀಡಾಪಟು ತ್ರಿಶಾ ಜಡಲಾ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರ ಅವ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಸ್ಮರಣಿಕೆ ಜತೆಗೆ ₹25 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದು ನುಡಿದರು.
ಇಳಕಲ್ ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಿಸಿಎಂ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು. ಉಪನ್ಯಾಸಕಿ ಅಕ್ಷಯಾ ಗೋಖಲೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.ಸಾಧಕರ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ಇಲ್ಲಿಯವರೆಗೆ ಅವ್ವ ಸೇವಾ ಟ್ರಸ್ಟ್ ವತಿಯಿಂದ 68 ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ, ಸಹಕಾರ್ಯದರ್ಶಿ ಶ್ರೀಪಾದ ರಾಣೆ, ವೆಂಕಟೇಶ ಬದ್ದಿ, ರಾಜು ದೇವರ ಇದ್ದರು.