ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಟ್ರಸ್ಟ್ ಗೆ ಪ್ರಶಸ್ತಿ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಸಿಂದಗಿಯ ಸಾರಂಗಮಠದ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ಶ್ರೀ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥದ ಕರ್ತೃ ಇಂಡಿಯ ಸಾಲೋಟಗಿ ಶ್ರೀ ಶೀವಯೋಗಿ ಶಿವಾಚಾರ್ಯರ ಸ್ಮರಣಾರ್ಥ ಕೊಡಮಾಡುವ ಶ್ರೀ ಶೀವಯೋಗಿ ಶಿವಾಚಾರ್ಯರ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಟ್ರಸ್ಟ್ ಗೆ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂದಗಿ

ಸಿಂದಗಿಯ ಸಾರಂಗಮಠದ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ಶ್ರೀ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥದ ಕರ್ತೃ ಇಂಡಿಯ ಸಾಲೋಟಗಿ ಶ್ರೀ ಶೀವಯೋಗಿ ಶಿವಾಚಾರ್ಯರ ಸ್ಮರಣಾರ್ಥ ಕೊಡಮಾಡುವ ಶ್ರೀ ಶೀವಯೋಗಿ ಶಿವಾಚಾರ್ಯರ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಟ್ರಸ್ಟ್ ಗೆ ನೀಡಿ ಗೌರವಿಸಲಾಯಿತು.

ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಶೈಲ ಟ್ರಸ್ಟ್ ನ ಶ್ರೀ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥ ಜಗತ್ತಿನಾದ್ಯಂತ ಪ್ರಚಾರ, ಪ್ರಸಾರವಾಗಿದೆ. ಆದರೆ ಅದರ ಕರ್ತೃ ಯಾರು ಎಂಬುದನ್ನು ನಾವು ಮರೆತಿದ್ದೇವೆ. ಅದನ್ನು ಸಂಶೋಧಿಸಿ ಅದಕ್ಕೆ ಪೂರಕವಾದ ಪುಷ್ಠೀಕರಣ ನೀಡಿ ಕೃತಿಯ ಕರ್ತೃಗಳಿಗೂ ಗೌರವಿಸಬೇಕು ಎಂಬ ಆಶಾಭಾವದಿಂದ ಸಾರಂಗಮಠದ ಶ್ರೀಗಳು ನಿರ್ಣಯಿಸಿರುವುದು ಉತ್ತಮ ಕಾರ್ಯ. ಸಿದ್ಧಾಂತ ಶಿಖಾಮಣಿ ಕರ್ತೃ ಸಾಲೋಟಗಿಯ ಶ್ರೀ ಶಿವಯೋಗಿ ಶಿವಾಚಾರ್ಯರು ಎಂದು ಗೊತ್ತಾದ ಮೇಲೆ ಅವರ ಹೆಸರಿನಿಂದ ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ, ₹ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾಜಕ್ಕೆ, ಶಿವಾಚಾರ್ಯರಿಗೆ, ಬದುಕಿಗೆ, ಸಮಾಜದ ಉನ್ನತೀಕರಣಕ್ಕೆ, ಮಾನವನ ಕಲ್ಯಾಣಕ್ಕೆ ಶ್ರೀ ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಅತ್ಯಂತ ಮಹತ್ವದ ಸಂದೇಶ ರಚಿಸಿದ್ದಾರೆ ಎಂದ ಅವರು, ಸಿಂದಗಿಯ ಸಾರಂಗಮಠ ಎಡಬಿಡದೆ ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಿಂದ ಈ ಭಾಗ ಬದಲಾವಣೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಪ್ರೋ ಬಿ.ಎಂ.ಗೊಡಕಿಂಡಿಮಠ ರಚಿಸಿದ ಕಾಯಕ ರತ್ನ ನಿಷ್ಠಾವಂತ ಪೊಲೀಸ್ ಅಧಿಕಾರಿ ಲಿಂ.ಎನ್. ಚೆನ್ನಯ್ಯ ಸ್ವಾಮಿ ಅವರ ಗ್ರಂಥವನ್ನು ಹಾಗೂ ಲಿಂ. ಚೆನ್ನವೀರ ಸ್ವಾಮಿಗಳ ಗಾಯನದ ಸಿಡಿಯನ್ನು ಶ್ರೀಶೈಲ ಪೂಜ್ಯರು ಬಿಡುಗಡೆಗೊಳಿಸಿದರು. ಕೊಣ್ಣೂರಿನ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪಾಳದ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು, ಶಹಾಪೂರಿನ ಶ್ರೀ ಸೂಗೂರೇಶ್ವರ ಶಿವಾಚಾರ್ಯರು, ಶಾಸಕ ಜಗದೀಶ ಗುಡಗುಂಟಿ , ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿದರು.

ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಾದದ ಶ್ರೀ ಶಿವಾನಂದ ಶಿವಾಚಾರ್ಯರು, ಕನ್ನೋಳ್ಳಿ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಕಲಕೇರಿಯ ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಎಸ್.ಎನ್. ಸಂಗಮೇಶ, ಬಿ.ಎಂ.ಗೊಡಕಿಂಡಿಮಠ, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಹಾಗೂ ಇತರರು ವೇದಿಕೆ ಮೇಲಿದ್ದರು.

ಶ್ರೀ ಪದ್ಮರಾಜ ವಿದ್ಯಾವರ್ಥದ ಸಂಸ್ಥೆಯ ನಿರ್ದೇಶಕರು ಸೇರಿದಂತೆ ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article