ಎಸ್‌ವಿ ಪರಮೇಶ್ವರ ಭಟ್ಟ ಪ್ರಶಸ್ತಿಗೆ ಹಿರಿಯ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಆಯ್ಕೆ

KannadaprabhaNewsNetwork |  
Published : Jan 31, 2026, 02:45 AM IST
ಸುಬ್ರಾಯ ಚೊಕ್ಕಾಡಿ | Kannada Prabha

ಸಾರಾಂಶ

ಕನ್ನಡದ ಖ್ಯಾತ ಕವಿ ಎಸ್.ವಿ ಪರಮೇಶ್ವರ ಭಟ್ಟ ಅವರ ಹೆಸರಿನಲ್ಲಿ ನೀಡಲಾಗುವ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ಕಥೆಗಾರ ಸುಬ್ರಾಯ ಚೊಕ್ಕಾಡಿ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ

ಮಂಗಳೂರು: ಕನ್ನಡದ ಖ್ಯಾತ ಕವಿ ಎಸ್.ವಿ ಪರಮೇಶ್ವರ ಭಟ್ಟ ಅವರ ಹೆಸರಿನಲ್ಲಿ ನೀಡಲಾಗುವ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ಕಥೆಗಾರ ಸುಬ್ರಾಯ ಚೊಕ್ಕಾಡಿ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.ಕನ್ನಡ ಸಾಹಿತ್ಯ. ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ಎಸ್‌ವಿಪಿ ಪ್ರತಿಷ್ಠಾನದಿಂದ ನೀಡುವ ಈ ಪ್ರಶಸ್ತಿಯನ್ನು 2026ರ ಸಾಲಿನಿಂದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವುದು.ಸುಬ್ರಾಯ ಚೊಕ್ಕಾಡಿ 1940ರ ಜೂ.29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತ ಗಣಪಯ್ಯ ಮತ್ತು ತಾಯಿ ಸುಬ್ಬಮ್ಮ. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.

ಕವಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ ಮುಂತಾದವರ ಸಂಪರ್ಕದಲ್ಲಿ ಇದ್ದರು. ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದು ಚೊಕ್ಕಾಡಿಯವರೇ. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸುವುದಕ್ಕೆ ಹಳ್ಳಿಯಲ್ಲಿ ‘ಸುಮನಸಾ’ ವಿಚಾರ ವೇದಿಕೆಯನ್ನೂ ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸರ್ವಾಂತರ್ಯಾಮಿ.

ಅವರು ರಚಿಸಿದ ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು. ಮೊನ್ನೆ ಸಿಕ್ಕವರು. ಇದರಲ್ಲಿ ಅದು, ಇತ್ಯಾದಿ. ಅವರ ಮೊದಲ ಕವನ ಸಂಕಲನ ‘ತೆರೆ’, ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು), ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು, ಸಮಾಲೋಕ, ಅವಲೋಕನ ಇವರ ವಿಮರ್ಶಾ ಕೃತಿಗಳು ಹಾಗೂ ಒಂದು ಸಂಪಾದಿತ ಕೃತಿ (ದ.ಕ. ಕಾವ್ಯ) ಪ್ರಕಟಿಸಿದ್ದಾರೆ. ಅವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ. ಅವರು ಕೆಲವು ಚಲನಚಿತ್ರಗಳಿಗೂ ಗೀತೆಗಳನ್ನು ಬರೆದಿದ್ದಾರೆ.

ಅವರು ಅಖಿಲ ಭಾರತ 69ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ದೆಹಲಿ ಆಕಾಶವಾಣಿ ಏರ್ಪಡಿಸಿದ ಸರ್ವಭಾಷಾ ಕವಿಸಮ್ಮೇಳನ ಅಧ್ಯಕ್ಷತೆ, ಸುಳ್ಯ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ದ.ಕ.ಜಿಲ್ಲಾ ಹದಿನೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಎರಡನೇ ವಿಶ್ವ ಕನ್ನಡ ಸಮ್ಮೇಳನ-ಬೆಳಗಾವಿ, ಕವಿಗೋಷ್ಠಿ ಹೀಗೆ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಲಷ್ಕರಿ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್.ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಸಹಿತ ಅನೇಕ ಪ್ರತಿಷ್ಠಿತ ಗೌರವಗಳು ದೊರಕಿವೆ ಎಂದು ಡಾ.ಜಗದೀಶ್‌ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್