ಬಾಲ್ಯವಿವಾಹದ ಬಗ್ಗೆ ಜಾಗೃತಿ ಅವಶ್ಯ: ವೆಂಕಟೇಶ್

KannadaprabhaNewsNetwork |  
Published : Jun 21, 2024, 01:01 AM IST
20ಕೆಎಂಎನ್‌ಡಿ-6ಮಂಡ್ಯ ತಾಲೂಕು ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾನೂನು ಅರಿವು-ನೆರವು ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಂಡ್ಯ ತಾಲೂಕು ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾನೂನು ಅರಿವು-ನೆರವು ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಅತಿ ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಹದಿ-ಹರಯದವರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ತಿಳಿಸಿದರು.ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಪಿಇಎಸ್ ಕಾನೂನು ಕಾಲೇಜು ವತಿಯಿಂದ ತಾಲೂಕಿನ ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸ್ವಚ್ಛ ಪರಿಸರ, ಆರೋಗ್ಯ ಶಿಬಿರ, ಕಾನೂನು ಅರಿವು-ನೆರವು ಹಾಗೂ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಾಲ್ಯ ವಿವಾಹದಿಂದ ಸಮಾಜ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಮಕ್ಕಳು ಜನಿಸುವುದರಿಂದ ಮಗುವಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದಲ್ಲದೆ, ತಾಯಿ ಆರೋಗ್ಯವೂ ಏರುಪೇರಾಗುವ ಸಾಧ್ಯತೆಗಳಿರುತ್ತವೆ ಎಂದರು.ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ನಿಗದಿಪಡಿಸುವ ಕಾಯಿದೆ ಜಾರಿಗೊಳಿಸಲು ಸಿದ್ಥತೆ ನಡೆಸಿತ್ತು. ಇಂತಹ ಕಾನೂನು ಜಾರಿ ಅಗತ್ಯವಿದೆ. ಇದರಿಂದ ಆರೋಗ್ಯವಂತ ಮಕ್ಕಳ ಜನನವಾಗುವುದರ ಜೊತೆಗೆ ಸಮಾಜ ಸ್ವಾಸ್ತ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.ಹದಿಹರಯದವರಲ್ಲಿ ಆಕರ್ಷಣೆ ಹೆಚ್ಚಿರುತ್ತದೆ. ಇಂತಹ ವಯಸ್ಸಿನಲ್ಲಿ ಪೋಷಕರು, ಶಿಕ್ಷಕರು, ವಿದ್ಯಾವಂತರು ಅವರಿಗೆ ಜಾಗೃತಿ ಮೂಡಿಸಬೇಕು. ಅವರ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ತಿಳಿಸುವುದರ ಮೂಲಕ ಅವರನ್ನು ಬೇರೆ ಆಲೋಚನೆಗಳಿಂದ ಹೊರಗೆ ಕರೆತರುವುದು ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.ಪ್ರತಿಯೊಬ್ಬರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದಲೋ, ಮಾನಸಿಕ ಒತ್ತಡದಿಂದಲೋ ಬಳಲುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕಾದದ್ದು ಬಹುಮುಖ್ಯವಾಗಿದೆ. ಇಂದಿನ ಆಹಾರ ಪದಾರ್ಥಗಳಲ್ಲೂ ಸಾಕಷ್ಟು ಬದಲಾವಣೆ ಅಗತ್ಯವಾಗಿದೆ. ಹಾನಿಕಾರ ಅಂಶವುಳ್ಳ ರಾಸಾಯನಿಕ ಮಿಶ್ರಿತ ಆಹಾರಗಳ ಸೇವನೆಯಿಂದಾಗಿ ನಾವೇ ಅನಾರೋಗ್ಯವನ್ನು ತಂದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕಿಂತಲೂ ಮುಖ್ಯವಾಗಿ ಕಾನೂನುಗಳ ಬಗ್ಗೆ ಅರಿವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪಿಇಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸಾಕಮ್ಮ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಸವರಾಜು, ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ರಾಜೇಂದ್ರ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪಿ. ಪ್ರಮೋದ್‌ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಸರಸ್ವತಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ