ಎಚ್.ಐ.ವಿ., ಏಡ್ಸ್ ಕುರಿತು ಜಾಗೃತಿ ಅತ್ಯವಶ್ಯಕ: ನ್ಯಾ. ಮಹಾಂತೇಶ ದರಗದ

KannadaprabhaNewsNetwork | Published : Dec 4, 2024 12:32 AM

ಸಾರಾಂಶ

ಎಚ್.ಐ.ವಿ., ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅತ್ಯವಶ್ಯಕವಾಗಿದೆ.

ವಿಶ್ವ ಏಡ್ಸ್ ದಿನಾಚರಣೆಯ ಅರಿವು ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಕೊಪ್ಪಳ

ಎಚ್.ಐ.ವಿ., ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಏಡ್ಸ್ ನಿಯಂತ್ರಣ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸ್ನೇಹ ಮಹಿಳಾ ಸಂಘ, ಚೈತನ್ಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸುರಕ್ಷ ಸಿ.ಎಸ್.ಸಿ, ಹೊಸ ಬೆಳಕು ಸಂಪರ್ಕ ಕಾರ್ಯಕರ್ತರ ಯೋಜನೆ, ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಙಾನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್.ಐ.ವಿ., ಏಡ್ಸ್ ಅರಿವಿನ ಕೊರತೆ ಯುವಕರಲ್ಲಿ ರೋಗ ಹೆಚ್ಚಾಗಲು ಕಾರಣವಾಗಿದೆ. ಭಾರತದಲ್ಲಿ ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ನಡೆಸಲಾಗುತ್ತದೆ. ಆದರೂ ಕೂಡ ಅರಿವಿನ ಕೊರತೆಯಿಂದ ಏಡ್ಸ್ ರೋಗಕ್ಕೆ ತುತ್ತಾಗುವವರು ಹೆಚ್ಚಾಗಿದ್ದಾರೆ. ಮದುವೆಯಾಗುವ ವರೆಗೂ ಯುವಕ, ಯುವತಿಯರು ಬ್ರಹ್ಮಚಾರ್ಯ ಮಾಡಬೇಕು. ಮದ್ದಿಲ್ಲದ ಮಾರಕರೋಗ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸಮಸ್ಯಾತ್ಮಕ ಗುಂಪಿನವರಿಗೆ ಅರಿವು ಮೂಡಿಸಿ ರೋಗಗಳ ಸಂಖ್ಯೆ ಸೊನ್ನೆಗೆ ತರಬೇಕಾಗಿದೆ. ನಮ್ಮ ನಮ್ಮ ಕುಟುಂಬಗಳನ್ನ ರಕ್ಷಣೆ ಮಾಡಲು ಪ್ರತಿಯೊಬ್ಬರು ಮೌನ ಮುರಿದು ಮಾತನಾಡಬೇಕು. ಎಚ್.ಐ.ವಿ ಹರಡುವ ಮಾರ್ಗಗಳ ಬಗ್ಗೆ ಎಲ್ಲಾ ಯುವಕರು ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಿ ಏಡ್ಸ್ ಮುಕ್ತ ಕೊಪ್ಪಳ ಜಿಲ್ಲೆ ಮಾಡಲು ಸಹಕರಿಸಬೇಕು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಎ. ಜಿಲ್ಲೆಯಲ್ಲಿ ಎಚ್.ಐ.ವಿ./ಏಡ್ಸ್ ನಿಯಂತ್ರಣದ ಸ್ಥಿತಿಗತಿ ಕುರಿತು ತಿಳಿಸಿ, 14 ಐ.ಸಿ.ಟಿ.ಸಿ ಕೇಂದ್ರಗಳು, 2 ಎ.ಆರ್.ಟಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಈ ಕಾಯಿಲೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದ್ದು, ಏಡ್ಸ್ ರೋಗ ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧ ರೀತಿಯ ಐಇಸಿ ಚಟುವಟುಕೆ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತದೆ ಎಂದರು.2017ರ ಏಡ್ಸ್ ನಿಯಂತ್ರಣ ತಡೆ ಕಾಯ್ದೆ ಪ್ರಕಾರ ಎಚ್..ವಿ ರೋಗಿಗಳಿಗೆ ಸರ್ಕಾರದ ಯಾವುದೇ ಸೌಲಭ್ಯ ನೀಡುವಲ್ಲಿ ತಾರತಾಮ್ಯ ಮಾಡಬಾರದು. ಒಂದು ವೇಳೆ ಮಾಡಿದರೆ ಕಾನೂನು ಪ್ರಕಾರ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸರಿಯಾದ ಮಾರ್ಗದಲ್ಲಿ ಹಕ್ಕು ಪಡೆಯೋಣ. ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಏಡ್ಸ್ ದಿನಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಸನ್ಮಾನ ಹಾಗೂ ರಕ್ತದಾನ ಶಿಬಿರ:

ಎಚ್.ಐ.ವಿ./ಏಡ್ಸ್ ತಡೆಗಟ್ಟುವ ಕಾರ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು. ವಿಶ್ವ ಏಡ್ಸ್ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಗಂಗಾವತಿಯ ಅಂಜನಾದ್ರಿ ರಕ್ತ ಭಂಡಾರ ಸಂಸ್ಥೆಯವರು ಶಿಬಿರ ನಡೆಸಿದ್ದು, ಈ ಶಿಬಿರದಲ್ಲಿ ಒಟ್ಟು 22 ರಕ್ತ ಸಂಗ್ರಹವಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಪ್ರಕಾಶ, ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಮಾರೆಗೌಡ, ಪ್ರಾಂಶುಪಾಲ ಡಾ. ಕರಿಬಸವೇಶ್ವರ, ಆರೋಗ್ಯ ಇಲಾಖೆ ಯಲಬುರ್ಗಾ ತಾಲೂಕಾ ಅಧಿಕಾರಿ ಡಾ. ಅಮರೇಶ, ಡಾ. ರಚನ ಸೇರಿದಂತೆ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಸಿಬ್ಬಂದಿ, ಆಪ್ತ ಸಮಾಲೋಚಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಎನ್.ಎಸ್.ಎಸ್/ಎನ್.ಸಿ.ಸಿ ಅಧಿಕಾರಿಗಳು, ಸಹ ಉಪಾನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸರ್ಕಾರೇತರ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಏಡ್ಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಿಂದ ಆರಂಭಗೊಂಡು ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮುಖಾಂತರ ಅಶೋಕ ಸರ್ಕಲ್‌ನಿಂದ ಗಂಜ್ ಸರ್ಕಲ್‌ನ ಮೂಲಕ ಪುನಃ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವರೆಗೆ ನಡೆಯಿತು.

ಮಹಿಳಾ ವಿಶೇಷ ದ್ವಿಚಕ್ರ ವಾಹನ ರ್‍ಯಾಲಿಗೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಸಿರು ನಿಶಾನೆ ತೋರಿಸಿದರು.

Share this article