ಪೌಷ್ಟಿಕ ಆಹಾರದ ಬಗ್ಗೆ ಮಕ್ಕಳು-ತಾಯಂದಿರಲ್ಲಿ ಜಾಗೃತಿ ಅಗತ್ಯ: ರೋಟರಿ ಕ್ಲಬ್ ಅಧ್ಯಕ್ಷ ಶಿವರಾಜು

KannadaprabhaNewsNetwork |  
Published : Sep 24, 2026, 01:45 AM IST
22ಎಚ್ಎಸ್ಎನ್6 : ಪಟ್ಟಣದ ಜೆ.ಪಿ. ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಕ್ಲಬ್ ನಿಂದ  ಮಕ್ಕಳಿಗೆ ಕಾರ್ಪೆಟ್ ಹಾಗೂ ಕುಡಿಯುವ ನೀರಿನ ಬಾಟಲ್ ವಿತರಿಸಲಾಯಿತು. | Kannada Prabha

ಸಾರಾಂಶ

ತಾಯಿ ಮತ್ತು ಮಗುವಿನ ಆರೋಗ್ಯವು ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿರದೆ, ಇಡೀ ಸಮಾಜದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದು, ವೈದ್ಯರ ಸಲಹೆಯಂತೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಅಗತ್ಯ ಪೌಷ್ಟಿಕಾಂಶ ಪಡೆಯುವುದು ಅತ್ಯಂತ ಮುಖ್ಯ ಎಂದು ಹೇಳಿದರು. ರೋಟರಿ ಸಂಸ್ಥೆ ಸೇವೆಯನ್ನು ತನ್ನ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡು ಆರೋಗ್ಯ, ಶಿಕ್ಷಣ, ಪರಿಸರ, ರಕ್ತದಾನ ಹಾಗೂ ತಾಯಿ–ಮಗು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ನೆರವು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ .

ಕನ್ನಡಪ್ರಭವಾರ್ತೆ, ಬೇಲೂರು

ಮಕ್ಕಳು ಹಾಗೂ ತಾಯಂದಿರಲ್ಲಿ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸುವುದರಿಂದ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಿವರಾಜು ಹೇಳಿದರು.

ಪಟ್ಟಣದ ಜೆ.ಪಿ. ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಕ್ಲಬ್ ಬೇಲೂರು ವತಿಯಿಂದ ಮಕ್ಕಳಿಗೆ ಕಾರ್ಪೆಟ್ ಹಾಗೂ ಕುಡಿಯುವ ನೀರಿನ ಬಾಟಲ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮತ್ತು ಮಗುವಿನ ಆರೋಗ್ಯವು ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿರದೆ, ಇಡೀ ಸಮಾಜದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದು, ವೈದ್ಯರ ಸಲಹೆಯಂತೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಅಗತ್ಯ ಪೌಷ್ಟಿಕಾಂಶ ಪಡೆಯುವುದು ಅತ್ಯಂತ ಮುಖ್ಯ ಎಂದು ಹೇಳಿದರು. ರೋಟರಿ ಸಂಸ್ಥೆ ಸೇವೆಯನ್ನು ತನ್ನ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡು ಆರೋಗ್ಯ, ಶಿಕ್ಷಣ, ಪರಿಸರ, ರಕ್ತದಾನ ಹಾಗೂ ತಾಯಿ–ಮಗು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ನೆರವು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಅಂಗನವಾಡಿ ಮೇಲ್ವಿಚಾರಕಿ ಮಮತಾ ಮಾತನಾಡಿ, ಪೋಷಣ್ ಮಾಸಾಚರಣೆಯ ಪ್ರಮುಖ ಉದ್ದೇಶ ಮಕ್ಕಳಲ್ಲಿ ಹಾಗೂ ತಾಯಂದಿರಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಕ್ಕಳ ಪೌಷ್ಟಿಕ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಸರ್ಕಾರ ಪ್ರತಿವರ್ಷ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಬೇಲೂರು ತಾಲೂಕಿನಲ್ಲಿ 310 ಅಂಗನವಾಡಿ ಕೇಂದ್ರಗಳಿವೆ. ತಾಲೂಕಿನಲ್ಲಿ ಒಟ್ಟು 9,015 ಫಲಾನುಭವಿಗಳಿದ್ದು, 908 ಗರ್ಭಿಣಿಯರು, 820 ಬಾಣಂತಿಯರು ಹಾಗೂ 6 ತಿಂಗಳಿಂದ 6 ವರ್ಷದೊಳಗಿನ 6,667 ಮಕ್ಕಳು ಪೋಷಣ್ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ ಎಂದು ತಿಳಿಸಿದರು.

ಅಂಗನವಾಡಿ ಶಿಕ್ಷಕಿ ಪಲ್ಲವಿ ಮಾತನಾಡಿ, ಮಕ್ಕಳನ್ನು ಚಾಪೆಯ ಮೇಲೆ ಮಲಗಿಸಲಾಗುತ್ತಿತ್ತು. ಮಕ್ಕಳಿಗೆ ಉತ್ತಮ ಗುಣಮಟ್ಟದ ಕಾರ್ಪೆಟ್ ಅಗತ್ಯವಿದೆ ಎಂದು ರೋಟರಿ ಸಂಸ್ಥೆಗೆ ಮನವಿ ಮಾಡಿದ್ದು ಉತ್ತಮ ಗುಣಮಟ್ಟದ ಕಾರ್ಪೆಟ್ ಹಾಗೂ ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ಒದಗಿಸಿರುವುದು ತುಂಬಾ ಸಂತೋಷ ತಂದಿದೆ. ಮಕ್ಕಳಿಗೆ ಸ್ವಚ್ಛ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಈ ನೆರವು ಸಹಕಾರಿಯಾಗಲಿದೆ ಎಂದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ರಾಜೇಗೌಡ, ಸದಸ್ಯರಾದ ಸಂದೇಶ್, ಮೊಗಪ್ಪ ಗೌಡ, ಎಚ್.ಕೆ. ರಮೇಶ್, ಪೋಷಣ್ ಅಭಿಯಾನ ಅಧಿಕಾರಿ ರಮ್ಯಾ, ಅಂಗನವಾಡಿ ಶಿಕ್ಷಕಿಯರಾದ ರತ್ನ, ಭಾಗ್ಯ, ಶೈಲಾ ಹಾಗೂ ಅಂಗನವಾಡಿ ಸಹಾಯಕಿಯರಾದ ಹರ್ಷಿಯ, ಫೌಝೀಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆ ಪರಿಹಾರಕ್ಕೆ ಡಿಸಿ ಸೂಚನೆ
ತರಳಬಾಳು ಸಂಸ್ಥೆಯಲ್ಲಿ ಸಮಗ್ರ ಬದುಕು ರೂಪಿಸುವ ಶಿಕ್ಷಣ: ಬಸವ ಮರುಳಸಿದ್ಧ ಸ್ವಾಮೀಜಿ