ಉಡುಪಿ: ವಿಶ್ವ ಪರಿಸರ ದಿನಾಚರಣೆ ಇಂದು ಜಗತ್ತಿನಾದ್ಯಂತ ಪರಿಸರದ ಬಗ್ಗೆ ಕಾಳಜಿ ವಹಿಸಲು ಜನರನ್ನು ಪ್ರೇರೇಪಿಸುವ ಮಹತ್ವದ ವೇದಿಕೆಯಾಗಿದೆ. ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರವನ್ನು ಮಿತಿ ಮೀರಿ ಬಳಸಿಕೊಂಡ ಕಾರಣಕ್ಕೆ ಇಂದು ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಪ್ರವಾಹ, ಬರ ಹಾಗೂ ಇತರ ಪ್ರಕೃತಿ ವಿಕೋಪಗಳಿಗೆ ಸಾಕ್ಷಿಯಾಗುತ್ತಿದ್ದು, ಪರಿಸರ ಸಮತೋಲನ ಹದಗೆಡುತ್ತಿದೆ. ಸಸಿ ನೆಟ್ಟು ಪೋಷಿಸಬೇಕು, ಪರಿಸರ ಸ್ವಚ್ಛತೆ ಕಾಪಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು” ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಹೇಳಿದರು. ಅವರು ಕಾಲೇಜಿನಲ್ಲಿ ಐಕ್ಯುಎಸಿ, ಅಭ್ಯದಯ ಸಮಾಜ ಕಾರ್ಯ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು ಮತ್ತು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.