ಬಳ್ಳಾರಿ: ಸ್ವದೇಶಿ ವಸ್ತುಗಳ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆತ್ಮನಿರ್ಭರ ಭಾರತ-ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಮನೆಗೆ ತೆರಳಿ ದೈನಂದಿನ ಜೀವನದಲ್ಲಿ ಭಾರತೀಯ ನಿರ್ಮಿತ ಉತ್ಪನ್ನಗಳ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ತಿಳಿಸಿದರು.
ಭಾರತವು ನಾನಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದು, ಈ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಕೋವಿಡ್ ಸಂದರ್ಭಗಳಲ್ಲಿ ಲಸಿಕೆಯನ್ನು ತಯಾರಿಸಿ, ದೇಶ ನಿವಾಸಿಗಳನ್ನು ಸಾಂಕ್ರಾಮಿಕ ರೋಗದಿಂದ ಪಾರು ಮಾಡಲಾಗಿದೆ. ಯುದ್ಧ ವಿಮಾನ ತಯಾರಿಕೆಯಲ್ಲಿ ಹೊರ ದೇಶಗಳ ಅವಲಂಬನೆ ಕಡಿಮೆಯಾಗಿದೆ. ಇತ್ತೀಚೆಗೆ ಜರುಗಿದ ಸಿಂಧೂರ ದಾಳಿ ವೇಳೆ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ. ಕೆಲವು ವಲಯದಲ್ಲಿ ಭಾರತ ಭಾಗಶಃ ಸ್ವಾವಲಂಬನೆಯ ಸಾಧಿಸಿದ್ದು, ದೇಶದ ಪ್ರತಿಯೊಬ್ಬರೂ ದೇಸೀಯ ವಸ್ತುಗಳ ಬಳಕೆಯನ್ನು ಮಾಡುವುದರಿಂದ ಪರಾವಲಂಬನೆ ಮತ್ತಷ್ಟು ಕಡಿಮೆಯಾಗಲಿದೆ. ಇದು ದೇಶದ ಸಮಗ್ರತೆ ಹಾಗೂ ಐಕ್ಯತೆಗೂ ಪುಷ್ಠಿ ನೀಡಲಿದೆ. ಅಭಿಯಾನ ಯಶಸ್ವಿಗೊಳಿಸುವ ದಿಸೆಯಲ್ಲಿ ಭಾಷಣ, ಪ್ರಬಂಧ ಸ್ಪರ್ಧೆಗಳು, ಸ್ವದೇಶಿ ಸಂಕಲ್ಪ ಸಮ್ಮೇಳನಗಳು, ಪಾದಯಾತ್ರೆಗಳು, ಸಹಿಸಂಗ್ರಹ ಅಭಿಯಾನ, ಗೋಡೆ ಬರಹ, ಬೀದಿನಾಟಕ ಸೇರಿದಂತೆ ನಾನಾ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 25 ಸಾವಿರ ಸ್ಟಿಕ್ಕರ್‌ಗಳನ್ನು ಮನೆಮನೆಗೆ ಅಂಟಿಸಲಾಗುತ್ತಿದೆ. ದೇಶದ ಪ್ರತಿಮನೆಯೂ ಸ್ವದೇಶಿಯಾಗಬೇಕು. ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಬೇಕು. ಸ್ವದೇಶಿ ಎನ್ನುವುದು ನಮ್ಮ ಜೀವನದ ಭಾಗವಾಗಬೇಕು ಎಂದು ಹೇಳಿದರು.
ಪಕ್ಷದ ಮುಖಂಡರಾದ ಡಾ.ಬಿ.ಕೆ. ಸುಂದರ್, ಎಸ್.ಗುರುಲಿಂಗನಗೌಡ, ಎಚ್.ಹನುಮಂತಪ್ಪ, ಕೆ.ಎಸ್. ದಿವಾಕರ್, ತಿಮ್ಮಾರೆಡ್ಡಿ, ಪುಷ್ಪಲತಾ, ಜಿ.ವೆಂಕಟರಮಣ, ಗುಡಿಗಂಟಿ ಹನುಮಂತಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.