ತೋಳನಕೆರೆಗೆ ಚರಂಡಿ ತಡೆಯಲು ಜಾಗೃತಿ ಅಗತ್ಯ: ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jan 10, 2024, 01:45 AM ISTUpdated : Jan 10, 2024, 02:23 PM IST
ತೋಳನಕೆರೆ | Kannada Prabha

ಸಾರಾಂಶ

ಈಗಾಗಲೇ ಕೆರೆಗೆ ಹರಿದು ಬರುವ ಚರಂಡಿ ನೀರು ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆಯೂ ಚರಂಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖೇದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸ್ಮಾರ್ಟ್‌ಸಿಟಿ ಯೋಜನೆಯಡಿ ತೋಳನಕೆರೆಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಕೆರೆಗೆ ಚರಂಡಿ ನೀರು ಹರಿದು ಬರುತ್ತಿರುವ ಪರಿಣಾಮ ಕೆರೆಯ ನೀರು ಕಲುಷಿತವಾಗುತ್ತಿದ್ದು, ಇದರ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜನಾಂದೋಲನ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿಯ ತೋಳನಕೆರೆ ಹೊರಾಂಗಣದಲ್ಲಿ ಪ್ರಕೃತಿ ಫೌಂಡೇಶನ್‌ ಹಾಗೂ ಚೈತನ್ಯ ಸ್ಪೋರ್ಟ್ಸ್‌ ಫೌಂಡೇಶನ್‌ ವತಿಯಿಂದ ಅಭಿವೃದ್ಧಿ ಪಡಿಸಿದ ವಾಟರ್‌ ಸ್ಪೋರ್ಟ್ಸ್‌ ಹಾಗೂ ವಿವಿಧ ಚಟುವಟಿಕೆಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಕೆರೆಗೆ ಹರಿದು ಬರುವ ಚರಂಡಿ ನೀರು ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆಯೂ ಚರಂಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿರುವುದು ಖೇದಕರ ಸಂಗತಿ ಎಂದರು.

ಕೆರೆಯ ಸುತ್ತಲಿನ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿ ಪಡಿಸಿದರೂ ಕೆರೆಯ ಕಲುಷಿತ ನೀರು ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಕೆರೆಯ ನೀರಿನ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮಾಡಬೇಕು. ಆ ಮೂಲಕ ಕೆರೆಯ ಸ್ವಚ್ಛತೆಗೆ ಜನರು ಕಾಳಜಿ ವಹಿಸುವಂತೆ ತಿಳಿವಳಿಕೆ ಮೂಡಿಸಬೇಕು.

ಸ್ಮಾರ್ಚ್‌ಸಿಟಿ ಅಡಿ ಇನ್ನೂ ಕೆಲಸ

ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಇನ್ನೂ ಅನೇಕ ಕೆಲಸಗಳು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆಗಲಿವೆ. ಇದಕ್ಕೆ ಜನರ ಸಹಕಾರವೂ ಅಗತ್ಯವಾಗಿದೆ. ಕ್ರೀಡಾ ಚಟುವಟಿಕೆ, ಮನೋರಂಜನೆ ಸದ್ಬಳಕೆಯ ಜತೆಗೆ ಜನರು ಸ್ವಚ್ಛತೆ ಬಗ್ಗೆ ಜಾಗೃತಿ ಹೊಂದಬೇಕಿದೆ ಎಂದರು.

ನಂತರ ಕೆರೆ ವಾತಾವರಣ ಮತ್ತು ಅಲ್ಲಿಯ ಅಭಿವೃದ್ಧಿ ಕಾರ್ಯಗಳನ್ನು ಅವಲೋಕನ ಮಾಡಿದರಲ್ಲದೇ, ಕೆರೆಯಲ್ಲಿ ಬೋಟಿಂಗ್‌ ಮಾಡಿದರು. ಬಳಿಕ ಕೆರೆ ಅಂಗಳದಲ್ಲಿ ಕೇಂದ್ರ ಸಚಿವರು ಕುದುರೆ ಸವಾರಿ ಮಾಡುವ ಮೂಲಕ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಮೇಯರ್‌ ವೀಣಾ ಬರದ್ವಾಡ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಗುತ್ತಿಗೆದಾರ ಪರಶುರಾಮ ಪೂಜಾರಿ ಸೇರಿದಂತೆ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ