ಕನ್ನಡಪ್ರಭ ವಾರ್ತೆ ಮದ್ದೂರು
ಸಂಚಾರಿ ಠಾಣೆ ಪೊಲೀಸರು ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸಿದರು. ಠಾಣೆ ಆವರಣದಿಂದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ದ್ವಿಚಕ್ರ, ಆಟೋ, ಸಾರಿಗೆ ಸಂಸ್ಥೆ, ಟಿಪ್ಪರ್ ಲಾರಿ ಹಾಗೂ ಸರಕು ಸಾಗಾಣಿಕೆ ಲಾರಿಗಳ ಚಾಲಕರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಚಾರಿ ಠಾಣೆ ಪಿಎಸ್ಐ ಮಹೇಶ್ ಕಿವಿಮಾತು ಹೇಳಿದರು.ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಭೆ ನಡೆಸಿದ ಪಿಎಸ್ಐ ಮಹೇಶ್, ಸಾರಿಗೆ ಸಂಸ್ಥೆ ಬಸ್ ಚಾಲಕರು ಓವರ್ ಟೇಕ್ ಮಾಡುವುದು ಹಾಗೂ ನಿಲ್ದಾಣವಲ್ಲದ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಧಾವಂತದಲ್ಲಿ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಚಾಲಕರಿಗೆ ಸಲಹೆ ನೀಡಿದರು.ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳಲ್ಲಿ ಟಿಪ್ಪರ್ ಲಾರಿಗಳ ಚಾಲಕರು ಮಣ್ಣು ಅಥವಾ ಜಲ್ಲಿಗಳನ್ನು ಸಾಗಾಣಿಕೆ ಮಾಡುವಾಗ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನಗಳ ಚಾಲನೆ ಮಾಡುತ್ತಿರುವುದರಿಂದ ಲಾರಿಗಳಲ್ಲಿ ಇರುವ ಮಣ್ಣು ಮತ್ತು ಜಲ್ಲಿ ಕಲ್ಲುಗಳು ರಸ್ತೆ ಮೇಲೆ ಬಿದ್ದು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಇಂತಹ ಟಿಪ್ಪರ್ ಲಾರಿ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ದ್ವಿಚಕ್ರ ಮತ್ತು ಆಟೋ ಚಾಲಕರು ಮದ್ಯಪಾನ ಮಾಡಿ ಮೊಬೈಲ್ ಸಂಭಾಷಣೆಯೊಂದಿಗೆ ಹಾಗೂ ಹೆಲ್ಮೆಟ್ ಧರಿಸದೆ ಅಥವಾ ತ್ರಿಬಲ್ ರೈಡಿಂಗ್ ನೊಂದಿಗೆ ಬೈಕ್, ಆಟೋ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಬರುತ್ತಿವೆ ಎಂದರು. ಆಟೋ ಚಾಲಕರು ಪಾರ್ಕಿಂಗ್ ಸ್ಥಳದಲ್ಲಿ ಆಟೋ ಪಾರ್ಕಿಂಗ್ ಮಾಡದೆ ಎಲ್ಲಿಂದರಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬ ದೂರುಗಳು ಸಾಮಾನ್ಯವಾಗಿದೆ. ಇಂತಹ ಆಟೋಗಳ ನೋಂದಣಿ ಸಂಖ್ಯೆಯನ್ನು ಸಾರ್ವಜನಿಕರು ಪೊಲೀಸ್ ಠಾಣೆಗೆ ಸಲ್ಲಿಸಿದ್ದಲ್ಲಿ ಚಾಲಕರ ವಿರುದ್ಧ ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ 2 ನೇ ಸಂಚಾರಿ ಠಾಣೆ ಪಿಎಸ್ಐ ಸರೋಜಾ ಬಾಯಿ ಹಾಗೂ ಸಿಬ್ಬಂದಿಗಳು ಇದ್ದರು.