ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ನಡೆದ ಧಾರವಾಡ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಣಿ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನೇಕರು ಮಾಧ್ಯಮದ ಹೆಸರಿನಲ್ಲಿ ಅಧಿಕಾರಿ, ಸಿಬ್ಬಂದಿ ಹೆದರಿಸಿ ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರಲ್ಲಿ ಮಾಧ್ಯಮ ಮತ್ತು ಮಾಧ್ಯಮ ಪ್ರತಿನಿಧಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರಿ ನೌಕರರಿಗೆ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಹೇಳಿದರು.ವಿವಿಧ ಇಲಾಖೆಗಳಿಗೆ ಮಾಧ್ಯಮದ ಹೆಸರಿನಲ್ಲಿ ಇತರರು ಭೇಟಿ ನೀಡಿ ಹೆದರಿಸುವ, ಹಣ ಕೇಳುವ ಘಟನೆಗಳು ಜರುಗುತ್ತಿದೆ. ಅನ್ಯ ಜಿಲ್ಲೆಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆದರೂ ಅಧಿಕೃತ ಪತ್ರಕರ್ತರಿಗೆ ವೃತ್ತಿ ದೃಷ್ಟಿಯಿಂದ ಸಿಗಬೇಕಾದ ಮಾಹಿತಿ ಮತ್ತು ಗೌರವ ನೀಡಲು ನೌಕರರಿಗೆ ಕಾರ್ಯಾಗಾರ ನಡೆಸಲಾಗುವುದು ಎಂದರು.
ಮೊದಲ ಬಾರಿಗೆ ಸನ್ಮಾನ:ವಿವಿಧ ಕ್ಷೇತ್ರದ ಸಾಧಕರನ್ನು ಜಿಲ್ಲಾಡಳಿತದಿಂದ ಪ್ರತಿ ವರ್ಷ ಸನ್ಮಾನಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪತ್ರಕರ್ತ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ, ಸರ್ಕಾರದಿಂದ ಪತ್ರಕರ್ತರಿಗೆ ಸಿಗಬೇಕಾದ ಸವಲತ್ತು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಾನು ಬಿಎಸ್ಸಿ ಅಗ್ರಿ ಓದುವಾಗ ಫಾರ್ಮ್ ಜರ್ನಲಿಸಂ ಕಲಿತಿದ್ದೇನೆ. ಹೀಗಾಗಿ ಪತ್ರಿಕಾ ರಂಗದ ಸವಾಲುಗಳು ನನಗೆ ತಿಳಿದಿವೆ. ಯಶಸ್ಸಿನ ಬಗ್ಗೆ ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳದೆ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಭುವನೇಶ ಪಾಟೀಲ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ತನ್ನದೇ ಘನತೆ, ಸ್ಥಾನವಿದೆ. ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಸುದ್ದಿಗಳಿಗೆ ಯಾವುದೇ ರೀತಿಯ ಗಟ್ಟಿತನ ಇರುವುದಿಲ್ಲ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಸೌಹಾರ್ದಯುತ ಸನ್ಮಾನ ಕಾರ್ಯಕ್ರಮ ನಿಜಕ್ಕೂ ಅಚ್ವರಿ ತಂದಿದೆ. ಇಲ್ಲಿಯ ನೆಲದ ಗುಣವೇ ಸೌಹಾರ್ದಯುತವಾಗಿ ಇರುವುದಾಗಿದೆ. ಪತ್ರಕರ್ತರ ಕಾರ್ಯಾಗಾರ ಹಮ್ಮಿಕೊಂಡರೆ ಜಿಲ್ಲಾಡಳಿತದೊಂದಿಗೆ ಸಂಘ ಕೈ ಜೋಡಿಸಲಿದೆ. ಅವರವರ ಜವಾಬ್ದಾರಿ ಅವರೇ ಮಾಡಿದರೆ ಉತ್ತಮ ಎಂದು ಹೇಳಿದರು.ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಕರ್ನಾಟಕ ಚಳವಳಿ, ಕರ್ನಾಟಕ ಶಬ್ದ ಉತ್ಪತ್ತಿ ಸೇರಿದಂತೆ ಹಲವು ಹೋರಾಟಗಳಿಗೆ ಧಾರವಾಡ ಜಿಲ್ಲೆ ತನ್ನದೇಯಾದ ಕೊಡುಗೆ ಇದೆ. ಪತ್ರಿಕೋದ್ಯಮ ಬದಲಾಗುತ್ತಿದ್ದು ಉತ್ತಮ ಆಡಳಿತ ವ್ಯವಸ್ಥೆಗೆ ಸಹಕಾರ ಅಗತ್ಯವಿದೆ. ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅದರ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಒಳ್ಳೆಯ ಕಾರ್ಯಗಳಿಗೆ ಸಹಾಯ, ಸಹಕಾರ ನೀಡುತ್ತೇವೆ. ಕ್ರಿಯಾಶೀಲ ಅಧಿಕಾರಿಗಳಿಗೆ ಎಲ್ಲ ರೀತಿಯ ವಾತಾವರಣ ಧಾರವಾಡದಲ್ಲಿದೆ. ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಅಸಹಾಯಕರಿಗೆ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡಬೇಕು ಎಂದು ಹೇಳಿದರು.ಎಸ್ಪಿ ಗುಂಜನ್ ಆರ್ಯ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜೆ. ಅಬ್ಬಾಸ್ ಮುಲ್ಲಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಹಿರಿಯ ಪತ್ರಕರ್ತರಾದ ವೆಂಕಟರಾಜು ಕೆ.ಜಿ., ಪ್ರಕಾಶ ಶೆಟ್, ವಿಠ್ಠಲದಾಸ್ ಕಾಮತ್, ಷಣ್ಮುಖ ಕೋಳಿವಾಡ, ಗಿರೀಶ ಪಟ್ಟಣಶೆಟ್ಟಿ, ವೆಂಕಟೇಶ ಪ್ರಭು, ರಾಹುಲ ಬೆಳಗಲಿ ಸೇರಿದಂತೆ ಪತ್ರಕರ್ತರು ಇದ್ದರು.
ವಾರ್ತಾ ಇಲಾಖೆಯ ಸಿಬ್ಬಂದಿ ಕಾವ್ಯಾ ಗೌಡರ ಪ್ರಾರ್ಥಿಸಿದರು. ರವಿ ಕುಲಕರ್ಣಿ ನಿರೂಪಿಸಿ, ವಂದಿಸಿದರು.