ಹೊಸಪೇಟೆ: ಪ್ರಸಿದ್ಧ ಪ್ರವಾಸಿ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಗೆ ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳಲ್ಲಿ ಭಕ್ತಿ ಭಾವನೆ ಮೂಡಿಸುವ ಸದುದ್ದೇಶದಿಂದ ಜಿಲ್ಲಾಡಳಿತವು ಹೊಸ ಹಜ್ಜೆ ಇರಿಸಿದೆ. ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಬಟ್ಟೆ ಧರಿಸಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಶಲ್ಯ, ಪಂಚೆ: ಹಂಪಿಯ ವಿರೂಪಾಕ್ಷೇಶ್ವರ ದೇವಾಲಯಕ್ಕೆ ತೆರಳಿದ ವೇಳೆ ಜಿಲ್ಲಾಧಿಕಾರಿಗಳು ತಾವೇ ಖುದ್ದು ಭಕ್ತರಿಗೆ, ಪ್ರವಾಸಿಗರಿಗೆ ಪಂಚೆ, ಶಲ್ಯ ನೀಡಿದರು. ತುಂಬುಡುಪು ಧರಿಸಿ ದೇವಸ್ಥಾನ ಪ್ರವೇಶಿಸದಂತೆ ಮಾಡಿದರು. ಈ ಮೂಲಕ ಜನರಲ್ಲಿ ದೇವಾಲಯದ ಬಗ್ಗೆ ಭಕ್ತಿ, ಭಾವನೆ ಬರುವಂತೆ ಇತರರಿಗೆ ಪ್ರೇರೇಪಣೆ ನೀಡಿದರು.
ಬಹಳ ದಿನಗಳ ಬೇಡಿಕೆ: ಹಂಪಿಯು ಪ್ರವಾಸಿ ತಾಣದ ಜತೆಗೆ ಸುಪ್ರಸಿದ್ಧ ಭಕ್ತಿಯ ಕೇಂದ್ರವೂ ಆಗಿದೆ. ಆದರೆ, ಕೆಲವು ಪ್ರವಾಸಿಗರು ಹಂಪಿಗೆ ಬಂದಾಗ ಬರ್ಮುಡಾ ಮತ್ತು ಜೀನ್ಸ್ ಪ್ಯಾಂಟ್‌ನಂತಹ ತುಂಡುಡುಗೆ ಧರಿಸಿಯೇ ವಿರುಪಾಕ್ಷೇಶ್ವರನ ದೇವಸ್ಥಾನ ಪ್ರವೇಶಿಸುತ್ತಿದ್ದು, ಸಾಮಾನ್ಯವಾಗಿತ್ತು. ಇದನ್ನು ಸಾರ್ವಜನಿಕರು ಅನೇಕ ಬಾರಿ ಪ್ರಶ್ನಿಸಿದ್ದರು. ಹೀಗಾಗಿ ಜಿಲ್ಲಾಡಳಿತವು ಅಗತ್ಯ ಕ್ರಮವಹಿಸಿ ಹೊಸ ಪರಂಪರೆಗೆ ಅವಕಾಶ ಕಲ್ಪಿಸಿದೆ.ದೇವಸ್ಥಾನದ ಸೇವೆಗೆ ಗಣಕೀಕರಣ: ದೇವಸ್ಥಾನದಲ್ಲಿ ಭಕ್ತಿಯ ಸೇವೆಗಳಿಗೆ ಭೌತಿಕವಾಗಿ ರಸೀದಿ ನೀಡಿ ಹಣ ಪಡೆಯುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಸಂಪೂರ್ಣ ಗಣಕೀಕರಣಗೊಳಿಸುವುದಕ್ಕೆ ಸಹ ಜಿಲ್ಲಾಧಿಕಾರಿಗಳು ವಿಶೇಷ ಕ್ರಮ ವಹಿಸಿದರು. ಮೊದಲನೇಯದಾಗಿ ಶಾಸಕರಿಂದಲೇ ಹಣ ಪಡೆದು ರಸೀದಿ ನೀಡಿ ಸೇವೆಗೆ ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದರು. ಇದರಿಂದ ಸೋರಿಕೆ ತಡೆದು ದೇವಸ್ಥಾನಕ್ಕೆ ಹೆಚ್ಚಿನ ಆದಾಯ ಬರುವಂತಾಗಲಿದೆ.
ಮೆಟಲ್ ಡಿಟೆಕ್ಟರ್ ಅಳವಡಿಕೆ: ಹಂಪಿ ಮತ್ತು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಿದ್ದು, ಇದರಿಂದಾಗಿ ದೇವಸ್ಥಾನದ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನದಲ್ಲಿ ಮೆಟಲ್ ಡಿಟೆಕ್ಟರನ್ನು ಅಳವಡಿಸಲು ಸಹ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಯಿತು. ಸಹಾಯಕ ಆಯುಕ್ತ ಮಹಮ್ಮದ್ ಅಲಿ ಅಕ್ರಮ್ ಷಾ ಹಾಗೂ ಹಂಪಿ ಗ್ರಾಮಸ್ಥರು ಮತ್ತು ಪ್ರವಾಸಿಗರು ಹಾಗೂ ಅಧಿಕಾರಿಗಳು ಇದ್ದರು.