ಗೋ ಮಾತೆ ಕುರಿತು ಜನರಿಗೆ ಮತ್ತಷ್ಟು ಮಾಹಿತಿ ನೀಡುವ ನಿಟ್ಟಿನಲ್ಲಿ ಇಲ್ಲೊಂದು ಕುಟುಂಬ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ಮುದ್ರಿಸುವ ಮೂಲಕ ಗಮನಸೆಳೆದಿದೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ಗೋವನ್ನು ಉಳಿಸಿ ಬೆಳೆಸಿದರೆ, ಕೋಟಿ ಪುಣ್ಯ ಗಳಿಸಿದ ಫಲ ಸಿಗಲಿದೆ. ಇದು ಸತ್ಯವೂ ಹೌದು. ಹೀಗಾಗಿಯೇ ನಾವು ಗಾವೋ ವಿಶ್ವಸ್ಯ ಮಾತರಃ, ವಂದೇ ಗೋ ಮಾತರಂ ಎಂದು ಗೋವನ್ನು ಜಗತ್ತಿನ ತಾಯಿ ಎಂದು ಪೂಜಿಸುತ್ತೇವೆ. ಆ ಗೋಮಾತೆಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇವೆ. ಇಂತಹ ಗೋ ಮಾತೆ ಕುರಿತು ಜನರಿಗೆ ಮತ್ತಷ್ಟು ಮಾಹಿತಿ ನೀಡುವ ನಿಟ್ಟಿನಲ್ಲಿ ಇಲ್ಲೊಂದು ಕುಟುಂಬ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ಮುದ್ರಿಸುವ ಮೂಲಕ ಗಮನಸೆಳೆದಿದೆ.
ಪಟ್ಟಣದ ಹಗೇದಕಟ್ಟಿ ಓಣಿಯ ಗೋ ಪ್ರೇಮಿ ಶರಣಪ್ಪ ತಿಪ್ಪಣ್ಣ ಘಾಟಗೆ ಅವರ ಮದುವೆ ಏ. 26ರಂದು ಇದ್ದು, ಲಗ್ನ ಪತ್ರಿಕೆಯಲ್ಲಿನ ಒಂದು ಪುಟದಲ್ಲಿ ಸಂಪೂರ್ಣ ಗೋ ಮಾತೆಯ ಮಹತ್ವವನ್ನು ಒಳಗೊಂಡ ಮಾಹಿತಿಯನ್ನೇ ಪ್ರಕಟಿಸಿದ್ದಾರೆ. ಆ ಮೂಲಕ ದುಂದುವೆಚ್ಚದ ಮೂಲಕ ಆಡಂಬರದ ಮದುವೆಗಳು ನಡೆಯುವ ಕಾಲದಲ್ಲಿ ಬಡ ಯುವಕನೊಬ್ಬ ತನ್ನ ಮದುವೆ ಪತ್ರಿಕೆಯಲ್ಲಿಯೇ ಗೋಮಾತೆಯ ಮೇಲಿನ ಕಾಳಜಿಯನ್ನು ತೋರಿಸಿದ್ದಾನೆ.
ಮದುವೆ ದಿನದಂದು ಬೆಳಗ್ಗೆ 10.30ಕ್ಕೆ ವಧು-ವರರಿಂದ ಗೋಪೂಜೆ ನಡೆಯಲಿದೆ. ಪಟ್ಟಣದ ಹಿರೇಮಠದ ಶ್ರೀ ಸಿದ್ದೇಶ್ವರ ಗೋಶಾಲೆಯಲ್ಲಿ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ನೂರಾರು ಗೋವುಗಳೊಂದಿಗೆ ಇರುವ ಚಿತ್ರಣ ಲಗ್ನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ.
ರೈತ, ಸೈನಿಕ ನೆನಪು
ಗೋವಿಗೆ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ಗೋ ಆಧಾರಿತ ಕೃಷಿಯಿಂದ ಜನರ ಜೀವನಮಟ್ಟ ಆರೋಗ್ಯಕರವಾಗಿತ್ತು. ಆದರೆ, ಸದ್ಯದ ಸ್ಥಿತಿ ಗಮನಿಸಿದಾಗ ಜನರ ಜೀವನಮಟ್ಟ ಆಸ್ಪತ್ರೆಯೊಂದಿಗೆ ಸಂಬಂಧವನ್ನು ಹೊಂದಿದೆ. ಗೋಆಧಾರಿತ ಮತ್ತು ಸಾವಯವ ಕೃಷಿ ಮಾಯವಾಗಿದೆ. ಎಲ್ಲೆಂದೆರಲ್ಲಿ ಕಾಣುತ್ತಿರುವ ಆಸ್ಪತ್ರೆಗಳಲ್ಲಿ ರೋಗಗ್ರಸ್ಥ ಜನರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಮಾನವ ಜನಾಂಗದ ಬದುಕಿಗೆ ಅತೀ ಅವಶ್ಯ ಬೇಕಾದ ಗೋವು, ರೈತ, ಸೈನಿಕರನ್ನು ನೆನೆಪಿಸುವ ಕಾರ್ಯವನ್ನು ಲಗ್ನಪತ್ರಿಕೆ ಮೂಲಕ ವಧು-ವರರು ಮಾಡಿದ್ದಾರೆ.
ಅಡಂಬರದ ಜೀವನದಲ್ಲಿ ದೇಶದ ಪರಂಪರೆ ಮೆರತು ಮದುವೆ ಪತ್ರಿಕೆಯಲ್ಲಿ ವಧು-ವರರು ಮತ್ತು ಕುಟುಂಬದವರ ಹೆಸರು ಹಾಕುತ್ತಾರೆ. ನಾನು ಹಿಂದೂಗಳು ಪೂಜಿಸುವ ಗೋ ಮಾತೆ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋವಿನ ಫೋಟೋ ಹಾಕಿಸಿದ್ದೇನೆ ಎನ್ನುತ್ತಾರೆ ಮದುಮಗ ಶರಣು ಘಾಟಿಗೆ.
ಗೋವುಗಳ ಸಂಖ್ಯೆ ಕಡಿಮೆ ಆಗುತ್ತಿದೆ. ನಮ್ಮ ಬದುಕೂ ಕ್ಷೀಣಿಸುತ್ತಿದೆ. ದೇಹದ ಆರೋಗ್ಯಕ್ಕಾಗಿ ಗೋಮಾತೆ ಹತ್ತಿರ ನಾವು ಹೋಗಲೇ ಬೇಕಾಗಿದೆ. ಗೋವಿನ ಅವಶ್ಯಕತೆ ಎಷ್ಟಿದೆ ಎಂಬುದರ ಕುರಿತು ಯುವಕ ತನ್ನ ಲಗ್ನ ಪತ್ರಿಕೆ ಮೂಲಕ ಜಾಗೃತಿ ಮೂಡಿಸಿದ್ದಾನೆ. ಇದು ಸಂತಸ ತಂದಿದೆ ಎಂದು ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.