ಧಾರವಾಡ:
ಈ ಬಾರಿ ಬರೋಬ್ಬರಿ ಯಾತ್ರೆಯ 550 ಯುವಕರ ಪಡೆ ಕಲಕೇರಿ ಸಂಗೀತ ಶಾಲೆಯ ಮೂಲೆ ಮೂಲೆಗೂ ಹೋಗಿ ಮಕ್ಕಳ ಹಾಡು ಕೇಳಿ, ತಬಲಾ, ವಾಯಲಿನ್ ನಿನಾದ ಆಲಿಸಿ, ನೃತ್ಯ ನೋಡಿ ಶಾಲೆಯ ಸಂಪೂರ್ಣ ಚಟುವಟಿಕೆಗಳ ಅಧ್ಯಯನ ಮಾಡಿತು. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಂಗೀತ, ಪಾಠಾಭ್ಯಾಸದ ಮಾಹಿತಿ ಸಹ ಪಡೆಯಿತು. ಇಡೀ ಶಾಲೆಯು ಸೆಲ್ಕೋ ಕಂಪನಿ ಸಹಕಾರದಲ್ಲಿ ಹೇಗೆಲ್ಲ ಸೋಲಾರ್ ವ್ಯವಸ್ಥೆ ಅಳವಡಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿತು. ಶಾಲೆ ನಡೆಯಲು ದಾನಿಗಳ ಸಹಕಾರ, ಈ ಶಾಲೆ ಮುಂದುವರಿಯಲು ತಾವು ಮಾಡಬೇಕಾದ ಸಹಕಾರ ಕುರಿತು ದೇಶ-ವಿದೇಶಗಳಿಂದ ಆಗಮಿಸಿದ್ದ ಯುವಕರ ತಂಡ ಕಾಳಜಿ ಮೆರೆದಿದ್ದು ವಿಶೇಷವಾಗಿತ್ತು.
ಏನಿದು ಜಾಗೃತಿ ಯಾತ್ರೆ:ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಗಾದೆಯಂತೆ ಜ್ಞಾನ ಪಡೆಯಲು ದೇಶ ಸುತ್ತಬೇಕು, ಇಲ್ಲವೇ ಕೋಶ ಓದಬೇಕು ಎನ್ನುತ್ತಾರೆ. ಅದರಲ್ಲೂ ಕೋಶ ಓದುವುದಕ್ಕಿಂತ ದೇಶ ಸುತ್ತಿದರೆ ಹೆಚ್ಚಿನ ಅನುಭವ. ಈ ಕಲ್ಪನೆಯಲ್ಲಿ ಮುಂಬೈನಲ್ಲಿ 2008ರಲ್ಲಿ ಯಾವುದೇ ಲಾಭೋದ್ದೇಶವಿಲ್ಲದೇ ಸಮಾನ ಮನಸ್ಕರಿಂದ ಶುರುವಾಗಿದ್ದು ಜಾಗೃತಿ ಯಾತ್ರೆ. ಇದೊಂದು ರೈಲು ಪ್ರಯಾಣವಾಗಿದ್ದು, 15 ದಿನಗಳಲ್ಲಿ 8,000 ಕಿಲೋಮೀಟರ್ ದೂರ 12 ನಗರಗಳ ಮೂಲಕ ಹಾದು ಹೋಗುತ್ತದೆ. ಈ ವರ್ಷ 550 ಉತ್ಸಾಹಭರಿತ ಯುವಕರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಕಲಕೇರಿ ಶಾಲೆಯಲ್ಲಿ ಸೋಮವಾರ ಇಡೀ ದಿನ ಈ ಯುವಕರ ತಂಡವು ಜ್ಞಾನ ಪಡೆಯಿತು.
12 ನಗರಗಳ ಯಾತ್ರೆ:ಯಾತ್ರೆ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ಯಾತ್ರೆ ಮಾಧ್ಯಮ ಸಂಯೋಜಕಿ ತಾಂಜಿಲಾ ವಾಜೀದ್, ನ. 16ರಿಂದ ಮುಂಬೈನಿಂದ ಪ್ರಾರಂಭವಾಗಿರುವ ಜಾಗೃತಿ ಯಾತ್ರೆಯು ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ಪಡೆದು ತಮ್ಮ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಿ. 1ರ ವರೆಗೆ 12 ನಗರ ತಲುಪಲಿರುವ ಯಾತ್ರೆಗೆ ಈ ಬಾರಿ ಬರೋಬ್ಬರಿ 47 ಸಾವಿರ ಅರ್ಜಿಗಳು ಬಂದಿದ್ದು, ಈ ಪೈಕಿ ಸಾಮಾಜಿಕ ಕಳಕಳಿ, ಆಸಕ್ತಿಗೆ ಅನುಗುಣವಾಗಿ 550 ಯುವಕರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ರಾಜ್ಯದ ನಾಲ್ಕೈದು ಯುವಕರು ಇದ್ದಾರೆ. ವಿದೇಶದ ಯುವಕರು ಸಹ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ಬಾರಿಯ ಯಾತ್ರೆಯಲ್ಲಿ ಮುಂಬೈನಿಂದ ಮೊದಲು ಕಲಕೇರಿ ಸಂಗೀತ ಶಾಲೆಗೆ ಭೇಟಿ ನೀಡಲಿದ್ದು, ಶಾಲೆಯ ಸಾಮಾಜಿಕ ಕಳಕಳಿ ಅಭಿನಂದನಾರ್ಹ ಎಂದರು.
ಯಾತ್ರೆ ಖುಷಿ ತಂದಿದೆ:ಮೂಲತ ಧಾರವಾಡದವಳೇಯಾಗಿದ್ದು ಆಯುರ್ವೇದಿಕೆ ವೈದ್ಯೆ. ಯಾತ್ರೆ ಬಗ್ಗೆ ಸಾಮಾಜಿಕ ಮಾಧ್ಯಮ ಮೂಲಕ ಗೊತ್ತಾಯಿತು. ಈ ಮೂಲಕ ಯಾತ್ರೆಗೆ ಸೇರ್ಪೆಡೆಯಾಗಿದ್ದು ಉತ್ತಮ ಅನುಭವ. ಅದರಲ್ಲೂ ಧಾರವಾಡದ ಸಂಗೀತ ವಿದ್ಯಾಲಯಕ್ಕೆ ಭೇಟಿ ನೀಡಿದ್ದು ನನಗೆ ಮತ್ತಷ್ಟು ಖುಷಿಯಾಗಿದೆ ಎಂದು ಡಾ. ಶ್ರೇಯಾ ಪಾಸ್ತೆ ಪ್ರತಿಕ್ರಿಯೆ ನೀಡಿದರು.ಏತಕ್ಕೆ ಈ ಶಾಲೆಗೆ ಭೇಟಿ
ನಮ್ಮ ಶಾಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ತಬಲಾ, ವಾಯಲಿನ್, ಸಿತಾರ, ನಾಟಕ, ನೃತ್ಯ, ಚಿತ್ರಕಲೆ ಹೀಗೆ ಒಂದು ಮಗುವಿಗೆ ಸಾಂಸ್ಕೃತಿಕ ವಲಯದಲ್ಲಿ ಏನೇನು ಅಗತ್ಯವಿದೆಯೋ ಅದು ಸಿಗಲಿದೆ ಎಂಬುದನ್ನು ಅರಿತು ಜಾಗೃತಿ ಯಾತ್ರೆಯು ಪ್ರತಿ ವರ್ಷ ನಮ್ಮ ಶಾಲೆಗೆ ಭೇಟಿ ನೀಡಲಿದೆ. ಇಲ್ಲಿಯ ಸೋಲಾರ್ ಶಕ್ತಿ ಬಳಕೆಯನ್ನು ಸಹ ಈ ಯಾತ್ರೆಯ ಅಧ್ಯಯನ ಮಾಡಲಿದೆ. ಬಹಳ ವರ್ಷಗಳಿಂದ ಈ ಯಾತ್ರೆ ಭೇಟಿ ನೀಡುತ್ತಿದ್ದು, ಈ ಬಾರಿ ಅತೀ ಹೆಚ್ಚು 550 ಯುವ ಜನಾಂಗ ಭೇಟಿ ನೀಡಿದ್ದು ಖುಷಿ ತಂದಿದೆ. ಜೊತೆಗೆ ಯಾತ್ರೆಗೆ ಭೇಟಿ ನೀಡಿದವರಲ್ಲಿ ಹೆಚ್ಚಿನವರು ಇಲ್ಲಿಯ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಹೆಮ್ಮೆ ಎನಿಸುತ್ತದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರಣ್ಣ ಪತ್ತಾರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ಆಡಂ ವುಡವರ್ಡ್, ಯಶವಂತ ಶಿಂಧೆ, ರೂಪಾಲಿ, ಕೃಷ್ಣಾ ಸುತಾರ, ಸಂತೋಷ ಪೂಜಾರ ಇದ್ದರು.