ಚುನಾವಣಾ ರಾಜಕೀಯದಿಂದ ದೂರ, ರಾಜಕಾರಣದಿಂದಲ್ಲ: ಡೀವಿ

KannadaprabhaNewsNetwork |  
Published : Mar 25, 2024, 12:46 AM ISTUpdated : Mar 25, 2024, 12:47 AM IST
ಫೋಟೋ:24ಪಿಟಿಆರ್‌-ಡಿ.ವಿ.ಮಾಜಿ ಕೇಂದ್ರ ಸಚಿವರಾದ ಸಂಸದ ಡಿ.ವಿ. ಸದಾನಂದ ಗೌಡ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ ಸಂಸದ ಡಿ.ವಿ. ಸದಾನಂದ ಗೌಡ.

ಕನ್ನಡಪ್ರಭ ವಾರ್ತೆ ಪುತ್ತೂರು

ನಾನು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದೇನೆ ಹಾಗೆಂದು ರಾಜಕಾರಣದಿಂದ ದೂರ ಉಳಿದಿಲ್ಲ. ಮುಂದೆ ರಾಜಕೀಯ ಶುದ್ಧೀಕರಣದ ಕೆಲಸ ಮಾಡಲಿದ್ದೇನೆ. ಇದಕ್ಕಾಗಿ ನನ್ನೊಂದಿಗೆ ಕೈ ಜೋಡಿಸಲು ಬರುವ ಸಮಾನ ಮನಸ್ಕರಿಗೆ ಸ್ವಾಗತವಿದೆ. ಈ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ಶಕ್ತಿ ನನಗಿದೆ ಎಂದು ಸಂಸದ, ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

ಅವರು ಭಾನುವಾರ ತವರು ನೆಲದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಪು ಮಾಡುವುದು ನನ್ನ ಉದ್ದೇಶವಲ್ಲ. ಕಳೆದ ಚುನಾವಣೆಯಲ್ಲಿ ಗುಂಪುಕಾರಿಕೆಯ ಕಾರಣದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಆದ್ದರಿಂದ ಗುಂಪುಗಾರಿಕೆ ರಾಜಕಾರಣ ಯಾವತ್ತೂ ಮಾಡುವುದಿಲ್ಲ. ನನ್ನದು ಬಿಜೆಪಿ ಗುಂಪು ಮಾತ್ರ ಎಂದು ಹೇಳಿದರು.

ಶುದ್ಧೀಕರಣಕ್ಕೆ ಒತ್ತು: ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಶುದ್ಧೀಕರಣ ಎಂಬುದು ಮುಂದಿನ ಭಾಗವಾಗಿದೆ. ಶುದ್ಧೀಕರಣಗೊಂಡವರು ನಮ್ಮೊಂದಿಗೆ ಇರಬಹುದು. ಹಿಂದೆ ನಮ್ಮ ಪಕ್ಷಕ್ಕೆ ೧೭ ಜನ ಬಂದಿದ್ದರು. ಇವರಲ್ಲಿ ೧೪ ಜನರನ್ನು ಮಂತ್ರಿಗಳನ್ನಾಗಿ ಮಾಡಿದೆವು. ಅವರೆಲ್ಲಾ ಕಾಂಗ್ರೆಸ್, ಜೆಡಿಎಸ್‌ನಲ್ಲಿದ್ದವರು. ನಮ್ಮಲ್ಲಿ ಬಂದು ಎಲ್ಲವನ್ನೂ ಅನುಭವಿಸಿದರು. ಈಗಲೂ ದೇಶ ಬೇರೆ ಬೇರೆ ಭಾಗಗಳಿಂದ ಎಲ್ಲ ಪಕ್ಷಗಳಿಂದ ಮೋದಿ ಅವರು ಪ್ರಧಾನಿ ಆಗಬೇಕು ಎಂಬ ನಿಟ್ಟಿನಲ್ಲಿ ಜನ ಬಿಜೆಪಿ ಸೇರುತ್ತಿದ್ದಾರೆ. ನಾವು ಉದ್ದೇಶಕ್ಕೆ ಬೆಲೆ ಕೊಡುತ್ತೇವೆ ಆದರೆ ಸ್ವಾರ್ಥ ರಾಜಕಾರಣಕ್ಕೆ ನಾವು ಮಣೆ ಹಾಕುವುದಿಲ್ಲ ಎಂದರು.

ಮೋದಿ ಮಾದರಿ: ನರೇಂದ್ರ ಮೋದಿ ಅವರು ೧೦ ವರ್ಷದಿಂದ ಸ್ವಾರ್ಥರಹಿತ ರಾಜಕಾರಣ ಮಾಡಿದ್ದಾರೆ. ಅದು ದೆಹಲಿಗೆ ಮಾತ್ರ ಸೀಮಿತವಲ್ಲ. ಎಲ್ಲ ರಾಜ್ಯಗಳಿಗೂ ಹಂಚಿಕೆಯಾಗಬೇಕು. ಕಳಗಿನ ಹಂತದ ತನಕ ಮುಂದುವರಿಯಬೇಕು. ನರೇಂದ್ರ ಮೋದಿ ಹೇಳಿರುವಂತಹ ಪರಿವಾರವಾದ ಮುಕ್ತ, ಭ್ರಷ್ಟಾಚಾರ ಮುಕ್ತ, ಜಾತಿವಾದ ಮುಕ್ತ ರಾಜನೀತಿಯ ಪರಿಕಲ್ಪನೆ ಸಾಕಾರಗೊಳ್ಳಬೇಕು. ಈ ಬಾರಿಯ ಚುನಾವಣೆಯಲ್ಲಿಯೇ ಅದು ಆಗಬೇಕಿತ್ತು. ಆದರೆ ಚುನಾವಣೆ ಕಳೆದ ಬಳಿಕವಾದರೂ ಅದಾಗಬೇಕು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಜವಾಬ್ದಾರಿ ಹೊತ್ತವರು ಪರಿವಾರವಾದ, ಭ್ರಷ್ಟಾಚಾರ, ಜಾತೀವಾದದಿಂದ ಹೊರತಾಗಿಲ್ಲದ ಕಾರಣ ಅದನ್ನು ಖಂಡಿತ ನಾವು ಅದರ ಶುದ್ಧೀಕರಣ ಮಾಡಲಿದ್ದೇವೆ ಎಂದು ಡೀವಿ ಹೇಳಿದರು.

ನನ್ನ ಪ್ರಾಮಾಣಿಕತನ, ಸಚ್ಚಾರಿತ್ರ್ಯಕ್ಕೆ ಯಾರದ್ದೂ ಸರ್ಟಿಫಿಕೇಟ್‌ನ ಅಗತ್ಯ ನನಗಿಲ್ಲ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಪ್ರಾಮಾಣಿಕತೆ. ಸಚ್ಚಾರಿತ್ರ್ಯ ಅರ್ಥ ಕಳೆದುಕೊಳ್ಳುವ ರಾಜನೀತಿ ಇರುವುದು ನೋವಿನ ಸಂಗತಿ. ಚುನಾವಣೆಯ ತನಕ ಈ ನೋವನ್ನು ನುಂಗಿಕೊಳ್ಳುತ್ತೇನೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಗರ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಮುಖಂಡರಾದ ಧರ್ಣಪ್ಪ ಗೌಡ, ಪವನ್ ಕುಮಾರ್ ಜೊತೆಗಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ