ಸಾಲುಮರದ ತಿಮ್ಮಕ್ಕನೂರು ಅಭಿವೃದ್ಧಿಯಿಂದ ದೂರ

KannadaprabhaNewsNetwork | Published : Jan 23, 2025 12:49 AM

ಸಾರಾಂಶ

ಸಾಲುಮರ ತಿಮ್ಮಕ್ಕನ ಹುಟ್ಟುರಾದ ಗುಬ್ಬಿ ತಾಲೂಕಿನ ಕಕ್ಕೆನಳ್ಳಿಗೆ ಬೇರೆ ಬೇರೆ ದೇಶದ ಜನರು ಹುಟ್ಟೂರು ನೋಡಲು ಬರುತ್ತಾರೆ. ಕಕ್ಕೆನಳ್ಳಿಗೆ ಸರಿಯಾದ ದಾರಿಯೇ ಇಲ್ಲ ವಾಸಿಸುವ ಜನರಿಗೆ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಸಾಲುಮರದ ತಿಮ್ಮಕ್ಕನ ದತ್ತು ಪುತ್ರ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಾಲುಮರ ತಿಮ್ಮಕ್ಕನ ಹುಟ್ಟುರಾದ ಗುಬ್ಬಿ ತಾಲೂಕಿನ ಕಕ್ಕೆನಳ್ಳಿಗೆ ಬೇರೆ ಬೇರೆ ದೇಶದ ಜನರು ಹುಟ್ಟೂರು ನೋಡಲು ಬರುತ್ತಾರೆ. ಕಕ್ಕೆನಳ್ಳಿಗೆ ಸರಿಯಾದ ದಾರಿಯೇ ಇಲ್ಲ ವಾಸಿಸುವ ಜನರಿಗೆ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಸಾಲುಮರದ ತಿಮ್ಮಕ್ಕನ ದತ್ತು ಪುತ್ರ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಕಕ್ಕೆನಳ್ಳಿ ಗ್ರಾಮದಲ್ಲಿ ಚಲವಾದಿ ಮಹಾಸಭಾ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಇಲ್ಲಿನ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ಅಭಿವೃದ್ಧಿ ಕಡೆ ಮನಸು ಮಾಡಬೇಕಾಗಿದೆ ಎಂದರು. ಸಾಲುಮರದ ತಿಮ್ಮಕ್ಕನ ಕೈಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕಿನ ಕಕ್ಕೆನಳ್ಳಿ ಗ್ರಾಮದ ಅಭಿವೃದ್ಧಿಗೆ ಪತ್ರ ಬರೆಸುವುದಾಗಿ ತಿಳಿಸಿದರು. ಸಾಲುಮರ ತಿಮ್ಮಕ್ಕನವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಿಲ್ಲದೆ ತಾಲೂಕಿನ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಇವರಿಗೆ ಮದುವೆ ಆದ ನಂತರ ಮಕ್ಕಳಾಗಲಿಲ್ಲ ಆದ್ದರಿಂದ ಹುಲಿಕಲ್, ಕುದೂರು ಹೆದ್ದಾರಿ 45 ಕಿ.ಮೀ ಉದ್ದಕ್ಕೂ ತಮ್ಮ ಮಕ್ಕಳೆಂದೇ ಭಾವಿಸಿ 385 ಬಗೆಬಗೆಯ ಮರಗಳನ್ನು ನೆಟ್ಟಿ ಸಾಕಿದರು. ಸಾಲುಮರ ತಿಮ್ಮಕ್ಕ ಬದುಕಿರುವಾಗಲೇ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಚಲವಾದಿ ಸಮುದಾಯದವರು ಸರ್ಕಾರವನ್ನು ಒತ್ತಾಯಿಸಿದರು.

ಛಲವಾದಿ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಟಿ.ಆರ್.ನಾಗೇಶ್ ಮಾತನಾಡಿ, ಪ್ರಪಂಚದ ಮನೆ ಮಾತಾಗಿರುವ ಪರಿಸರ ಪ್ರೇಮಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಕಕ್ಕೇನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದಲ್ಲಿ ಹೆಸರು ಮಾಡಿರುವುದು ಸಾಮಾನ್ಯ ಸಂಗತಿಯಲ್ಲಿ. ನಮ್ಮ ಛಲವಾದಿ ಸಮುದಾಯದಲ್ಲಿ ಹುಟ್ಟಿರುವ ಹೆಣ್ಣುಮಗಳಿಗೆ ನಾವೆಲ್ಲರೂ ಅತ್ಯಂತ ಹೆಚ್ಚಿನ ಗೌರವ ಸಲ್ಲಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ನಾಗಭೂಷಣ್ ಮಾತನಾಡಿ ಗುಬ್ಬಿ ತಾಲೂಕಿನವರೇ ಆಗಿರುವ ಸಾಲುಮರದ ತಿಮ್ಮಕ್ಕನವರ ಹೆಸರನ್ನು ಗುಬ್ಬಿ ಬಸ್ ನಿಲ್ದಾಣಕ್ಕೆ ಹೆಸರು ಇಡುವುದರಿಂದ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಶಾಸಕರು ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರಾಗಿರುವುದರಿಂದ ಈ ಕೆಲಸವನ್ನು ಅವರು ಮಾಡಬಹುದು ಅದ್ದರಿಂದ ಎಲ್ಲಾರು ಶಾಸಕರಿಗೆ ಮನವಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಗೌರವಾಧ್ಯಕ್ಷ ಬಿ.ಲೋಕೇಶ್, ಯುವ ಘಟಕದ ಅಧ್ಯಕ್ಷ ಎಚ್. ಕೆ.ಮಧು, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ , ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯೆ ಗಂಗಮಣಿ, ಪಿಡಿಒ ಭಾನುಮತಿ, ಛಲವಾದಿ ಮಹಾಸಭಾ ಕಸಬ ಘಟಕದ ಅಧ್ಯಕ್ಷ ಎ.ಟಿ.ಮುನಿರಾಜು, ಎ.ಮಂಜುನಾಥ್, ಗಿರಿಜಮ್ಮ, ನಿಟ್ಟೂರು ಬಿ.ಆರ್.ಗೋಪಾಲ್, ಶಾಖಾ ಘಟಕದ ಅಧ್ಯಕ್ಷ ಆರ್.ನಾಗರಾಜ್, ಹಿರಿಯ ಮುಖಂಡ ಕೆಂಪಯ್ಯ, ಗೌರವಾಧ್ಯಕ್ಷ ಕೆಂಪಣ್ಣ, ತಾಲೂಕಿನ ವಿವಿಧ ಛಲವಾದಿ ಮಹಾಸಭಾ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಸಾಲುಮರದ ತಿಮ್ಮಕ್ಕ ಬಡಾವಣೆಯ ಶಾಖಾ ಘಟಕದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article