ವಿಮಾನ ಬಿಡಿಭಾಗ, ಆಟಿಕೆ ತಯಾರಿಕೆಗೆ ಏಕಸ್‌ ಫೇಮಸ್‌

KannadaprabhaNewsNetwork |  
Published : Sep 11, 2025, 12:03 AM IST
ಏಕಸ್‌  | Kannada Prabha

ಸಾರಾಂಶ

ಲೋಹದ ಹಕ್ಕಿಗಳಿಗೆ ಬಿಡಿಭಾಗಗಳನ್ನು ತಯಾರಿಸುವುದರ ಜತೆಗೆ ಮಕ್ಕಳ ಅಚ್ಚುಮೆಚ್ಚಿನ ಆಟಿಕೆ ಸಾಮಗ್ರಿ ಹಾಗೂ ಗೃಹ ಬಳಕೆ ವಸ್ತುಗಳನ್ನು ಉತ್ಪಾದಿಸುವ ಕರ್ನಾಟಕದ ಹೆಮ್ಮೆಯ ಏಕಸ್‌ (AEQUS) ಕಂಪನಿಯು ಬೆಳಗಾವಿ ಹೊರಹೊರಲಯದ 250 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 4000 ಜನರಿಗೆ ಉದ್ಯೋಗವಕಾಶ ಒದಗಿಸಿಕೊಟ್ಟಿದೆ.

ರುದ್ರಯ್ಯ ಎಸ್.ಎಸ್‌.ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಹದ ಹಕ್ಕಿಗಳಿಗೆ ಬಿಡಿಭಾಗಗಳನ್ನು ತಯಾರಿಸುವುದರ ಜತೆಗೆ ಮಕ್ಕಳ ಅಚ್ಚುಮೆಚ್ಚಿನ ಆಟಿಕೆ ಸಾಮಗ್ರಿ ಹಾಗೂ ಗೃಹ ಬಳಕೆ ವಸ್ತುಗಳನ್ನು ಉತ್ಪಾದಿಸುವ ಕರ್ನಾಟಕದ ಹೆಮ್ಮೆಯ ಏಕಸ್‌ (AEQUS) ಕಂಪನಿಯು ಬೆಳಗಾವಿ ಹೊರಹೊರಲಯದ 250 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 4000 ಜನರಿಗೆ ಉದ್ಯೋಗವಕಾಶ ಒದಗಿಸಿಕೊಟ್ಟಿದೆ.

ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಏಕಸ್‌ ಕಂಪನಿಯು ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಉದ್ಯೋಗವಕಾಶ ಕಲ್ಪಿಸಿದ್ದು, ಸ್ಥಳೀಯರನ್ನೇ ಕೆಲಸಕ್ಕೆ ತೆಗೆದುಕೊಂಡು ತರಬೇತಿ ನೀಡಿ ಕೌಶಲ್ಯಭರಿತರನ್ನಾಗಿ ರೂಪಿಸಿದೆ. ಬೆಂಗಳೂರಲ್ಲಿ ಅರವಿಂದ್ ಮೆಲ್ಲಿಗೇರಿ ಅವರು 2006ರಲ್ಲಿ ಸಣ್ಣದಾಗಿ ಪ್ರಾರಂಭಿಸಿದ ಕ್ವೆಸ್ಟ್ ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಎಂಬ ಕಂಪನಿಯೇ 2009ರಿಂದ ಬೆಳಗಾವಿಯಲ್ಲಿ ಏರೋಸ್ಪೇಸ್ ಪ್ರೊಸೆಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (API) ಆಗಿ ಕಾರ್ಯಾಚರಣೆ ಆರಂಭಿಸಿತು. ಇದು ಭಾರತದ ಮೊದಲ ಅಧಿಸೂಚಿತ ನಿಖರತೆಯ ಎಂಜಿನಿಯರಿಂಗ್ ವಿಶೇಷ ಆರ್ಥಿಕ ವಲಯ ಆಗಿದ್ದು, ಜಾಗತಿಕವಾಗಿ ಅವಶ್ಯವಿರುವ ವಿಮಾನದ ಬಿಡಿಭಾಗಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತದೆ.

ಉತ್ತರ ಕರ್ನಾಟಕಕ್ಕೆ ಒತ್ತು:

ಏಕಸ್‌ನ ಉತ್ಪಾದನಾ ಘಟಕಗಳು ಉತ್ತರ ಕರ್ನಾಟಕದ ಬೆಳಗಾವಿ, (ಏರೋಸ್ಪೇಸ್), ಹುಬ್ಬಳ್ಳಿ (ಗ್ರಾಹಕ ಬಳಕೆ ವಸ್ತುಗಳು) ಮತ್ತು ಕೊಪ್ಪಳ (ಆಟಿಕೆಗಳು) ನಗರಗಳಲ್ಲಿ ಲ್ಲಿ ಕೇಂದ್ರೀಕೃತವಾಗಿವೆ. ಅಲ್ಲದೇ, ಅಮೆರಿಕದ ಟೆಕ್ಸಾಸ್ ಮತ್ತು ಫ್ರಾನ್ಸ್‌ನಲ್ಲಿ 2 ವಿದೇಶಿ ಉತ್ಪಾದನಾ ಘಟಕಗಳು ಇವೆ.

ಏರ್‌ಬಸ್‌, ಬೋಯಿಂಗ್‌ಗಳಿಗೆ ರಫ್ತು:ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಏರ್‌ಬಸ್‌ ಹಾಗೂ ಬೋಯಿಂಗ್‌ ಕಂಪನಿ ಒಳಗೊಂಡಂತೆ ಕಾಲಿನ್ಸ್ ಮತ್ತು ಸಫ್ರಾನ್ ಕಂಪನಿಗಳಿಗೆ ಏಕಸ್ ತಾನು ತಯಾರಿಸಿದ ಬಿಡಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಏಕಸ್‌ ಘಟಕಗಳಲ್ಲಿರುವ ಅತ್ಯಾಧುನಿಕ ಯಂತ್ರಗಳು 15 ಲಕ್ಷ ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಏರೋಸ್ಪೇಸ್ ಘಟಕಗಳಿಗಾಗಿ 10 ಸಾವಿರ ಟನ್ ಹೈಡ್ರಾಲಿಕ್ ಪ್ರೆಸ್ (ಫೋರ್ಜಿಂಗ್ ಯಂತ್ರ) ಅನ್ನು ಸ್ಥಾಪಿಸಿದೆ. ಅಲ್ಯೂಮಿನಿಯಂ, ಸ್ಟೀಲ್, ಟೈಟಾನಿಯಂ ಅಥವಾ ನಿಕಲ್ ಆಧಾರಿತ ಮಿಶ್ರಲೋಹಗಳಲ್ಲಿ ಎಂಜಿನ್‌ಗಳು, ಲ್ಯಾಂಡಿಂಗ್ ಗೇರ್ ಮತ್ತು ಬ್ರೇಕಿಂಗ್ ಸಿಸ್ಟಮ್ ಘಟಕಗಳಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಏರೋ-ಸ್ಟ್ರಕ್ಚರಲ್ ಭಾಗಗಳನ್ನು ರೂಪಿಸುವಲ್ಲಿ ಏಕಸ್‌ ಪರಿಣತಿ ಹೊಂದಿದೆ.

ಹಲವು ಮೊದಲುಗಳಿಗೆ ಸಾಕ್ಷಿ:ಏರೋಸ್ಪೇಸ್ ಘಟಕಗಳಿಗಾಗಿ ಭಾರತದಲ್ಲಿ ಮೊದಲ ಭಾರಿಗೆ ವಿಶೇಷ ಆರ್ಥಿಕ ವಲಯ ಸ್ಥಾಪಿಸಿದ ಏಕಸ್‌, ತನ್ನ ಏರೋಸ್ಟ್ರಕ್ಚರ್ಸ್ ಘಟಕದ ಮೂಲಕ ವಾಣಿಜ್ಯ ವಿಮಾನಗಳಿಗಾಗಿ ಪ್ಲಗ್ ಡೋರ್‌ ಮತ್ತು ಓವರ್-ವಿಂಗ್ ಎಕ್ಸಿಟ್ ಡೋರ್‌ಗಳನ್ನು ಜೋಡಿಸಿದ ಭಾರತದ ಮೊದಲ ಕಂಪನಿಯಾಗಿದೆ. ಏರ್‌ಬಸ್ ಮತ್ತು ಬೋಯಿಂಗ್ ಎರಡರಿಂದಲೂ ಅನುಮೋದನೆ ಪಡೆದಿದೆ. ತನ್ನ ಕಾರ್ಯಕ್ಷಮತೆಗೆ 2016ರಲ್ಲಿ ಏರ್‌ಬಸ್ ನಾವೀನ್ಯತೆ ಪ್ರಶಸ್ತಿ, 2019ರಲ್ಲಿ ಏರ್‌ಬಸ್ ಪಾಲುದಾರ (D2P) ಪ್ರಶಸ್ತಿ, ಕಾಲಿನ್ಸ್ ಏರೋಸ್ಪೇಸ್ ಅತ್ಯುತ್ತಮ ಪೂರೈಕೆದಾರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಏಕಸ್ ಮುಡಿಗೇರಿಸಿಕೊಂಡಿದೆ.

ಬಾಕ್ಸ್)))

60 ದೇಶಗಳಿಗೆ ಆಟಿಕೆ ರಫ್ತು

ಮಕ್ಕಳಿಗೆ ಅಗತ್ಯವಿರುವ ಆಟಿಕೆಗಳನ್ನು ಆಯಾ ಕಂಪನಿಗಳಿಂದ ಆರ್ಡರ್‌ ಪಡೆಯುವ ಏಕಸ್‌, ಹಸ್ಬ್ರೋ, ಸ್ಪಿನ್ ಮಾಸ್ಟರ್, ಗನ್‌ಗಳಂತ ಆಟಿಕೆ ಪರಿಕರಗಳನ್ನು ಹಾನಿಕಾರಕವಲ್ಲದ ಬಣ್ಣಗಳನ್ನು ಬಳಸಿ ತಯಾರಿ ಸುಮಾರು 60 ದೇಶಗಳಿಗೆ ರಫ್ತು ಮಾಡುತ್ತದೆ. ಈ ಮೂಲಕ ಆಟಿಕೆ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಚೀನಾಕ್ಕೆ ಸ್ಪರ್ಧೆ ನೀಡುತ್ತಿದ್ದು, ಮೇಕ್ ಇನ್‌ ಇಂಡಿಯಾಗೆ ಒತ್ತು ನೀಡಿದೆ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!