ಮಾಗಡಿ: ಪಟ್ಟಣದ ಶ್ರೀ ಸರಸ್ವತಿ ವಿದ್ಯಾ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ದೇವಸ್ಥಾನದ ಮಾದರಿ ನಿರ್ಮಿಸಿ ಅಯೋಧ್ಯೆಯ ವಾತಾವರಣ ಸೃಷ್ಟಿಸಿರುವುದು ವಿಶೇಷವಾಗಿತ್ತು.
ಪಟ್ಟಣದ ಶ್ರೀ ಸರಸ್ವತಿ ವಿದ್ಯಾಮಂದಿರ ಮಂಗಳ ವಿದ್ಯಾ ಕೇಂದ್ರ ಶಾಲೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸಂಭ್ರಮ ಮತ್ತು ಶ್ರೀರಾಮರ ವೈಭವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ಮಾದರಿಯಲ್ಲೇ ಬೃಹತ್ ವೇದಿಕೆ ಹಾಕಿ ವೇದಿಕೆಯ ಮಧ್ಯಭಾಗದಲ್ಲಿ ಎಲ್ಇಡಿ ಸ್ರ್ಕೀನ್ ಅಳವಡಿಸಿ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ನೋಡುಗರ ಗಮನ ಸೆಳೆಯಿತು. ಜೊತೆಗೆ ಶಾಲಾ ಮಕ್ಕಳು ಶ್ರೀರಾಮನ ವಿವಿಧ ಗೀತೆಗಳ ಹಾಡಿಗೆ ನೃತ್ಯ ಮಾಡಿದರು. ಜೊತೆಗೆ ಪೋಷಕರಿಗೂ ವಿಶೇಷ ತರಬೇತಿ ನೀಡಿ ಮಕ್ಕಳ ಜೊತೆ ನೃತ್ಯ ಮಾಡಿಸಿದರು. ಶಾಲಾ ಆಡಳಿತ ಮಂಡಳಿ ಪೋಷಕರು ಹಾಗೂ ಸಾರ್ವಜನಿಕರಿಗೆ ರಾಮನ ದರ್ಶನ ಮಾಡಿಸಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಸರಸ್ವತಿ ಶಾಲೆಯಲ್ಲಿ ಮಕ್ಕಳಿಗೆ ದೇಶದ ಕಲೆ, ಸಂಸ್ಕೃತಿ, ಸಂಸ್ಕಾರ ಕುರಿತು ಅರಿವು ಮೂಡಿಸಲಾಗುತ್ತಿದೆ. ಭಗವದ್ಗೀತೆ ಪಠಣೆ ಸೇರಿದಂತೆ ಹಿಂದುತ್ವದ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯ ವಾರ್ಷಿಕೋತ್ಸವ ವಿಭಿನ್ನವಾಗಿ ನಡೆಸಿಕೊಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಎಸ್.ನಾಗರಾಜು, ಬಿಇಒ ಚಂದ್ರಶೇಖರ್, ಪುರಸಭಾ ಸದಸ್ಯ ಕೆ.ವಿ.ಬಾಲು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ.ಅರ್ಜುನ್, ಡಾ. ಸೌಮ್ಯ, ಡಾ. ಸುವರ್ಣ, ಜಗದೀಶ್, ನಿಜಗುಣ ಶಿವಯೋಗಿ, ಬಲರಾಮಯ್ಯ, ಗೌರೀಶ್, ನಾಗೇಂದ್ರ, ರಾಘವೇಂದ್ರ, ಸಂದೀಪ್, ದೇವರಾಜ್, ವಸಂತ, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು. ಫೋಟೋ 7ಮಾಗಡಿ3:
ಮಾಗಡಿಯ ಸರಸ್ವತಿ ವಿದ್ಯಾಮಂದಿರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳ ಜೊತೆ ಪೋಷಕರು ನೃತ್ಯ ಮಾಡಿದರು.