ಕನ್ನಡಪ್ರಭ ವಾರ್ತೆ ಉಡುಪಿ
ನಮ್ಮ ಕೆಲವು ಪೀಳಿಗೆಗಳ ಪೂರ್ವಜರು ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕು ಎಂದು ಕನಸು ಕಂಡರು ಹಂಬಲಿಸಿದರು, ತ್ಯಾಗ ಬಲಿದಾನಗೈದರು, ಸುದೀರ್ಘ ಹೋರಾಟ ನಡೆಸಿದರು. ಅದೆಲ್ಲದರ ಫಲ ನಮಗೆಲ್ಲ ಲಭಿಸಿದೆ. ನಿಜಕ್ಕೂ ನಾವು ಭಾಗ್ಯವಂತರು. ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಧನ್ಯತೆಯನ್ನು ಅನುಭವಿಸಿದ್ದೇವೆ ಎಂದು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಅಯೋಧ್ಯಾ ರಾಮನ ದರ್ಶನ ಪಡೆದು ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ.ಅವರು ಮೂರು ದಿನಗಳ ಕಾಲ ತಮ್ಮ 2000ಕ್ಕೂ ಅಧಿಕ ಶಿಷ್ಯರು, ಭಕ್ತರೊಡಗೂಡಿ ನಡೆಸಿದ ಅಯೋಧ್ಯಾ ಯಾತ್ರೆಯ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ರಾಮನ ದಯೆಯಿಂದ ದೇಶದಲ್ಲಿ ಸುಭಿಕ್ಷೆ, ಶಾಂತಿ, ಸಮೃದ್ಧಿ ನೆಲೆಗೊಳ್ಳಲಿ. ಸಮಸ್ತ ಹಿಂದು ಸಮಾಜ ಮುಂದೆಯೂ ಸಂಘಟಿತವಾಗಿ ಕಾಶಿ, ಮಥುರಾ ಕ್ಷೇತ್ರಗಳನ್ನೂ ದಾಸ್ಯದಿಂದ ಮುಕ್ತಗೊಳಿಸುವಂತಾಗಿ ನಮ್ಮ ಜೀವಿತಾವಧಿಯಲ್ಲೇ ಅದನ್ನೂ ಕಾಣುವ ಭಾಗ್ಯ ಒದಗಲಿ. ಹಿಂದು ಸಂಘಟಿತ ಶಕ್ತಿಯಿಂದ ದೇಶಕ್ಕೆ ಮಾತ್ರವಲ್ಲ ಜಗತ್ತಿಗೂ ಶ್ರೇಯಸ್ಸಿದೆ ವಿನಹ ಅಪಾಯವಿಲ್ಲ ಎಂದ ಶ್ರೀಗಳು ಆಶಿಸಿದ್ದಾರೆ.ರಾಮಮಂದಿರದ ಲೋಕಾರ್ಪಣೆ ಸಂದರ್ಭದಲ್ಲಿ ರಾಮನಿಗೆ ಶ್ರೀ ಸಂಸ್ಥಾನದಿಂದ ಬೆಳ್ಳಿಯ ಪಲ್ಲಕ್ಕಿ ಮತ್ತು ಸ್ವರ್ಣ ಅಷ್ಟ ಪ್ರಭಾವಳಿ ಸಮರ್ಪಣೆಯ ಅವಕಾಶ ಸಿಕ್ಕಿದ್ದು ಸಮಸ್ತ ಗೌಡ ಸಾರಸ್ವತ ಸಮಾಜದ ಮೇಲೆ ರಾಮ ತೋರಿದ ಕೃಪೆ ಎಂದೇ ಭಾವಿಸಬೇಕು. ಮುಂದೆಯೂ ಇಂಥಹ ಸೇವೆ ನಡೆಸುವ ಶಕ್ತಿ ಭಕ್ತಿಯನ್ನು ಸಮಸ್ತ ಸಮಾಜಕ್ಕೆ ರಾಮ ನೀಡಬೇಕು ಎಂದೂ ಶ್ರೀಗಳು ಪ್ರಾರ್ಥಿಸಿದರು.
ಅಯೋಧ್ಯಾ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ರಾಷ್ಟ್ರೀಯ ಪ್ರಮುಖರಾದ ಗೋಪಾಲ್ ಜಿ. ಮೊದಲಾದವರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ರಾಮದೇವರ ದರ್ಶನ ಮಾಡಿಸಿ, ಪ್ರಸಾದ ಹಸ್ತಾಂತರಿಸಿದರು.ಇದೇ ಸಂದರ್ಭದಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಲೋಕಲ್ಯಾಣಾರ್ಥ ಸುಂದರಕಾಂಡ ಪಾರಾಯಣ ಸಹಿತ ಹವನ ನೆರವೇರಿತು. ಯಾತ್ರೆಯ ಅಂಗವಾಗಿ ಶ್ರೀಗಳು ಸರಯೂ ನದಿ ಸ್ನಾನ, ಹನುಮಾನ್ ಗಡಿಯ ಹನುಂತನ ದರ್ಶನವನ್ನೂ ಪಡೆದರು.