ಬಿಲ್ಲು ಹಿಡಿದು ನಿಂತ ರಾಮ, ಎಸ್.ಎಸ್. ಉಳ್ವೇಕರ ಬಿಡಿಸಿದ ಅಯೋಧ್ಯೆಯತ್ತ ಬೊಟ್ಟು ಮಾಡಿ ತೋರಿಸುತ್ತಿರುವ ರಾಮ, ಹೂವಿನಿಂದ ಮಾಡಿದ ರಂಗೋಲಿ, ವಿವಿಧ ಬಗೆಯ ರಂಗೋಲಿ ಕೂಡಾ ಹಾಕಲಾಗಿತ್ತು.
ಕಾರವಾರ: ಜಾತ್ರೆ ಎಂದರೆ ಸಾಮಾನ್ಯವಾಗಿ ಪೂಜೆ ಪುನಸ್ಕಾರ, ಧಾರ್ಮಿಕ ವಿಧಿವಿಧಾನ ನಡೆಯುವುದು ಸಹಜ. ಆದರೆ ಈ ದೇವರ ಜಾತ್ರೆಯಲ್ಲಿ ಪೂಜೆ ಪುನಸ್ಕಾರದ ಜತೆಗೆ ಮನೆಗಳ ಎದುರು ರಂಗೋಲಿ ಬಿಡಿಸಿದ್ದು ವಿಶೇಷವಾಗಿತ್ತು.
ನಗರದ ಕೋಡಿಬೀರ ದೇವರ ಜಾತ್ರೆಯಲ್ಲಿ ೨೫ಕ್ಕೂ ಅಧಿಕ ಬಗೆಯ ರಂಗೋಲಿ ಹಾಕಿದ್ದು, ಭಕ್ತರ, ನೋಡುಗರ ಕಣ್ಮನ ಸೆಳೆಯಿತು. ಕೋಡಿಬೀರ ದೇವಸ್ಥಾನದ ಸುತ್ತಮುತ್ತ ರಸ್ತೆ, ದೇವಸ್ಥಾನಕ್ಕೆ ಸಾಗುವ ರಸ್ತೆಯಲ್ಲಿ ಇರುವ ಕಮಾನನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀದೇವರಿಗೆ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು. ಶ್ರೀದೇವರ ಪಲ್ಲಕ್ಕಿ ಉತ್ಸವ ಕೂಡಾ ನಡೆಯಿತು.
ಆಕರ್ಷಕ ರಂಗೋಲಿ: ಅಯೋಧ್ಯೆ ರಾಮ ಮಂದಿರದ ಕಿರು ಮಾದರಿ ಎಲ್ಲರ ಗಮನ ಸೆಳೆದಿದೆ. ನಗರದ ನಿವಾಸಿ ಗೋಪಾಲ ಹರಿಕಂತ್ರ ಎನ್ನುವವರು ಲೇಸರ್ ಕಟಿಂಗ್ ಮೂಲಕ ರಾಮಂದಿರದ ಮಾದರಿ ನಿರ್ಮಿಸಿದ್ದು, ಜಾತ್ರೆಯ ವೇಳೆ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಿದ್ದರು. ಎಲ್‌ಐಡಿ ಲೈಟಿಂಗ್‌ನಲ್ಲಿ ರಾಮ ಮಂದಿರದ ಮಾದರಿ ಕಣ್ಮನ ಸೆಳೆಯುವಂತಿತ್ತು. ದೇವಸ್ಥಾನಕ್ಕೆ ಬಂದ ಭಕ್ತರು ರಾಮ ಮಂದಿರದ ಬಳಿ ನಿಂತು ಫೋಟೋ, ವೀಡಿಯೋ ತೆಗೆದುಕೊಂಡು ಸಂತಸಪಟ್ಟರು.
ಶ್ರೀರಾಮನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಶೀರ್ವದಿಸುತ್ತಿರುವ, ಪ್ರಧಾನಿ ಭಕ್ತಿಯಿಂದ ತಲೆಬಾಗಿ ಕೈಮುಗಿದಿರುವ ರಂಗೋಲಿ ಸಹ ಗೋಪಾಲ ಹರಿಕಂತ್ರ ಬಿಡಿಸಿದ್ದು ಆಕರ್ಷಕವಾಗಿತ್ತು.
ಬಿಲ್ಲು ಹಿಡಿದು ನಿಂತ ರಾಮ, ಎಸ್.ಎಸ್. ಉಳ್ವೇಕರ ಬಿಡಿಸಿದ ಅಯೋಧ್ಯೆಯತ್ತ ಬೊಟ್ಟು ಮಾಡಿ ತೋರಿಸುತ್ತಿರುವ ರಾಮ, ಹೂವಿನಿಂದ ಮಾಡಿದ ರಂಗೋಲಿ, ವಿವಿಧ ಬಗೆಯ ರಂಗೋಲಿ ಕೂಡಾ ಹಾಕಲಾಗಿತ್ತು. ಈ ಬಾರಿಯ ಕೋಡಿಬೀರ ಜಾತ್ರೆಯಲ್ಲಿ ಅಯೋಧ್ಯೆ, ಪ್ರಧಾನಿಯನ್ನು ಆಶೀರ್ವದಿಸುತ್ತಿರುವ ರಾಮನ ರಂಗೋಲಿ ಅತ್ಯಂತ ಹೆಚ್ಚು ಆಕರ್ಷಣೀಯವಾಗಿತ್ತು.
ಮೋದಿ ತಲೆಬಾಗಿ ರಾಮನಿಗೆ ನಮಸ್ಕರಿಸುತ್ತಿರುವ ರಂಗೋಲಿ ಪಕ್ಕದಲ್ಲೇ ಶ್ರೀರಾಮ ಮಂದಿರ ಅಯೋಧ್ಯೆ ಎಂದು ತಲೆಬರಹ ಬರೆದು, ಪರಮಾತ್ಮ ಅವತರಿಸಿದ ಈ ಪುಣ್ಯಭೂಮಿಯಾದ ಭಾರತದ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವು ಜ. ೨೨, ೨೦೨೪ರಂದು ಲೋಕಾರ್ಪಣೆಗೊಳ್ಳಲಿದ್ದು, ಇದು ದೇಶದ ಸಮಸ್ತ ಜನತೆಗೆ ಅತ್ಯಂತ ಸಂಭ್ರಮದ, ಸಗಡಗರ, ಸಂತಸದ ದಿನವಾಗಿರುತ್ತದೆ ಎಂಬಿತ್ಯಾದಿ ಬರಹ ಬರೆದು ಗೋಪಾಲ ಪ್ರದರ್ಶನಕ್ಕೆ ಇರಿಸಿದ್ದರು.