ಇಂದು ಆಯುಧ ಪೂಜೆ: ಖರೀದಿ ಭರಾಟೆ ಜೋರು

KannadaprabhaNewsNetwork | Published : Oct 11, 2024 11:52 PM

ಸಾರಾಂಶ

ಶಿವಮೊಗ್ಗ ನಗರದಲ್ಲಿ ಗುರುವಾರ ದಸರಾ ಹಬ್ಬಕ್ಕೆ ಬಾಳೆ ಕಂದು ಖರೀದಿಸುತ್ತಿರುವ ಜನ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಹಬ್ಬ ದಸರಾ ಭಾಗವಾಗಿ ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ಜಿಲ್ಲೆಯ ಜನರು ಸಜ್ಜುಗೊಂಡಿದ್ದು, ಗುರುವಾರ ಆಯುಧ ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ಜನರು ನಿರತರಾಗಿದ್ದರು.

ಆಯುಧ ಪೂಜೆ ದಿನದಂದು ವಾಹನಗಳು, ಯಂತ್ರೋಪಕರಣಗಳು ಹಾಗೂ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇರುವುದರಿಂದ ಜನರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಮಹಿಳೆಯರು ಮನೆ ಹಾಗೂ ಹೊರ ಆವರಣವನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರೆ, ಪುರುಷರು, ಮಕ್ಕಳು ವಾಹನಗಳನ್ನು ತೊಳೆದರು. ಅಂಗಡಿಗಳು, ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

*ನಗರ, ಪಟ್ಟಣಗಲ್ಲಿ ಜನಸಂದಣಿ:

ಹಬ್ಬದ ಪ್ರಯುಕ್ತವಾಗಿ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಗುರುವಾರದಿಂದಲೇ ಜನಸಂದಣಿ ಹೆಚ್ಚಿತ್ತು. ಬೆಳಗ್ಗೆಯಿಂದಲೇ ಜನರು ಪೇಟೆಗೆ ಬಂದು ಹಬ್ಬದ ಆಚರಣೆಗೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಮಧ್ಯಾಹ್ನದಿಂದ ಶರುವಾದ ಜನಸದಣಿ ಸಂಜೆ ವೇಳೆಗೆ ವಿಪರೀತವಾಗುವಷ್ಟು ಇತ್ತು. ಆಯುಧ ಪೂಜೆಗಾಗಿ ಹೂವು, ನಿಂಬೆ ಹಣ್ಣು, ಬೂದುಕುಂಬಳ ಕಾಯಿ, ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು ಹಂಪಲು, ಅರಿಸಿನ, ಕುಂಕುಮ ಸೇರಿದಂತೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುಗಾಡಿಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆ ಹಣ್ಣುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳು, ಅಂಗಡಿಗಳನ್ನು ಅಲಂಕರಿಸಲು ಬಳಸುವ ಕೃತಕ ಹಾರಗಳು, ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು.

*ಕುಂಬಳಕಾಯಿಗೆ ಬೇಡಿಕೆ ಕಡಿಮೆ:

ಹಲವು ವ್ಯಾಪಾರಿಗಳು ಬೂದುಕುಂಬಳ ಕಾಯಿ ರಾಶಿ ಹಾಕಿದ್ದರು ಸಹಿತ ಈ ಬಾರಿ ವ್ಯಾಪಾರ ಮಾತ್ರ ಕಡಿಮೆ ಇತ್ತು. ರುಪಾಯಿ 50 ರಿಂದ 200 ವರೆಗೂ ಕುಂಬಳಕಾಯಿಯ ಬೆಲೆ ಕಂಡಿಬಂದಿದೆ. ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್ ವೃತ್ತ, ಗೋಪಾಳ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ಹಬ್ಬದ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ. ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡುಹೂವಿಗೆ ಮಾರಿಗೆ 60 ರಿಂದ 100 ರು. ವರೆಗೆ ಇದ್ದು, ಸೇವಂತಿಗೆ, ಜಾಜಿ ಮತ್ತು ಕಾಕಡ ಮಾರಿಗೆ 170 ರಿಂದ 250 ರವರೆಗೆ ಇದೆ. ಬಿಡಿ ಹೂವುಗಳು ಕೆಜಿಗೆ 400 ಆಗಿದ್ದು, ಸೇಬು, ಬಾಳೆಹಣ್ಣು, ಮುಸುಂಬಿ ಎಲ್ಲಾ ರೀತಿಯ ಹಣ್ಣುಗಳು ಕೂಡ ಬೆಲೆ ಏರಿಕೆ ಕಂಡು ಬಂದಿದೆ.

ನಾಳೆ ಚಾಮುಂಡೇಶ್ವರಿ ಅಂಬಾರಿ ಮೆರವಣಿಗೆ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿರುವ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗುತ್ತಿದ್ದು, ಅ.12ರಂದು ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ.

ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋಟೆ ರಸ್ತೆಯ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅಮ್ಮನವರ ಅಂಬಾರಿ ಮೆರವಣಿಗೆಯು ಶಿವಮೊಗ್ಗದ ಹಲವು ದೇವಾನು ದೇವತೆಗಳೊಂದಿಗೆ ಆರಂಭವಾಗಲಿದೆ.

ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯು ಫ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಮೈದಾನ ತಲುಪಲಿದೆ. ಮೆರವಣಿಗೆಯಲ್ಲಿ ಮಂಗಳವಾದ್ಯ, ಸಮಾಳ ವಾದ್ಯ, ನಂದಿಧ್ವಜ ಕುಣಿತ, ವೀರಗಾಸೆ, ಚಂಡೆ-ಮದ್ದಳೆ, ಯಕ್ಷಗಾನ, ನಗಿಸುವ ಗೊಂಬೆಗಳು, ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗದಿಂದ ದೊಡ್ಡ ಗೊಂಬೆಗಳ ಕುಣಿತ ಕೀಲು ಕುದುರೆ ನೃತ್ಯ, ಕುಂಡ ಹೊತ್ತ ಮಹಿಳೆ ಕುಣಿತ, ಮಹಿಳಾ ಡೊಳ್ಳು ಕುಣಿತ,ಹುಲಿವೇಷ, ರೋಡ್ ಆರ್ಕೆಸ್ಟ್ರಾ ಹಾಗೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಖ್ಯಾತ ಗಾಯಕಿ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಸಂಜೆ 6.30ಕ್ಕೆ ತಹಸೀಲ್ದಾರ್ ಬಿ.ಎನ್. ಗಿರೀಶ್ ಅವರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬನ್ನಿ ಮುಡಿದ ನಂತರ ಅತ್ಯಾಕರ್ಷಕ ಪಟಾಕಿ, ಸಿಡಿಮದ್ದು ಪ್ರದರ್ಶನ ಜೊತೆಗೆ ರಾವಣ ಕಾರ್ಯಕ್ರಮ ಇರುತ್ತದೆ. ಉದ್ಘಾಟನೆ ಹಾಗೂ ಬನ್ನಿ ಮುಡಿಯುವಿಕೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಇನ್ನಿತರ ಗಣ್ಯರು ಉಪಸ್ಥಿತರಿರುವರು.

ಆಹಾರ ದಸರಾದಲ್ಲಿ ಅಮ್ಮ-ಮಗ ಅಡುಗೆ ಸ್ಪರ್ಧೆ

ಶಿವಮೊಗ್ಗ: ದಸರಾ ಪ್ರಯುಕ್ತ ಆಹಾರ ದಸರಾದ ಅಮ್ಮ-ಮಗ ಅಡುಗೆ ಮಾಡುವ ಸ್ಪರ್ಧೆಯನ್ನು ಗುರುವಾರ ನಗರದ ವೀರಶೈವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 14 ಅಮ್ಮ-ಮಗ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಆಹಾರ ದಸರಾದ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅನಿತಾ, ಕಿಶನ್, ದ್ವಿತೀಯ ಬಹುಮಾನ ಸಂಭ್ರಮ್, ದೀಪ ಹಾಗೂ ತೃತೀಯ ಬಹುಮಾನ ವಿಜಯ್, ರೇಣುಕಾ ಅವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ, ಆರ್‌ಸಿಎಚ್ ಡಾ.ನಾಗರಾಜ, ಸುಪ್ರಿಯಾ, ಡಾ.ಮಲ್ಲಿಕಾರ್ಜುನ್, ಡಾ.ಮಲ್ಲಪ್ಪ,ಡಾ.ರೇಖಾ ಕೃಷ್ಣಮೂರ್ತಿ, ನವೀನ್‌ ಇದ್ದರು. ಕಾರ್ಯಕ್ರಮದಲ್ಲಿ ಹೆಸರುಕಾಳು ಉಪಯೋಗಿಸಿ ತಯಾರಿಸುವ ಖಾದ್ಯಗಳಿಗೆ ಮಾತ್ರ ಅವಕಾಶವಿದ್ದು, 30 ನಿಮಿಷಗಳ ಸಮಯ ನಿಗಧಿ ಪಡಿಸಲಾಗಿತ್ತು. ಹೆಸರುಕಾಳಿನ ವಿವಿಧ ಪಲ್ಯಗಳು, ಕೋಸುಂಬರಿಗಳು, ವಿವಿಧ ರೀತಿಯ ಲಾಡುಗಳು, ಪಾಯಸ, ಸುಕುರುಂಡೆ, ಹೆಸರು ಕಾಳು ಚಕ್ಕುಲಿ, ಹೋಳಿಗೆ, ದೋಸೆ, ಚಟ್ಟಂ ಬೊಡೆ, ಕಿಚಡಿ, ಮೊದಲಾದ ಪದಾರ್ಥಗಳನ್ನು ತಯಾರಿಸಿದ್ದರು.

ಇಂದು ಸಂಗೀತ-ಜಾನಪದ ವೈಭವ ಕಾರ್ಯಕ್ರಮ

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಏರ್ಪಡಿಸಿರುವ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಲಿದೆ.

ಅ.11ರಂದು ಶುಕ್ರವಾರ ಸಂಜೆ 5.30ಕ್ಕೆ ವಿನೋಬ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಂಗೀತ-ಜಾನಪದ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಖ್ಯಾತ ನಟಿ ಭವ್ಯ ಉದ್ಘಾಟಿಸಲಿದ್ದಾರೆ.

ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ನಂತರ ಕಲಾತ್ಮ ತಂಡದಿಂದ ಸಂಗೀತ ವೈಭವ ಹಾಗೂ ಬೆಂಗಳೂರಿನ ನಾಗರಾಜ ಮೂರ್ತಿ ತಂಡದಿಂದ ಜಾನಪದ ವೈಭವ ಜರುಗಲಿದೆ.

ಸಂಗೀತ ವೈಭವದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಮಂಗಳಾ ರವಿ, ಕನ್ನಡ ಕೋಗಿಲೆ ಖ್ಯಾತಿಯ ಸುರಕ್ಷಾ ದಾಸ್, ಪಾರ್ಥ ಚಿರಂತನ್ ಹಾಗೂ ಮಲೆನಾಡಿನ ಕೋಗಿಲೆ ವಿಜೇತ ಗಾಯಕ ಪೃಥ್ವಿಗೌಡ ಅವರಿಂದ ಗಾಯನವಿದ್ದು, ವಿನಯ್ ಶಿವಮೊಗ್ಗ ನಿರೂಪಿಸಲಿದ್ದಾರೆ.ಅ.11 ಮತ್ತು 12ರಂದು ಅಲಂಕಾರ ದಸರಾ ಸಮಿತಿಯಿಂದ ನಗರದ ಪ್ರಮುಖ ರಸ್ತೆಗಳಾದ ಕೋಟೆ ರಸ್ತೆಯ ಬೆಕ್ಕಿನ ಕಲ್ಮಠ, ಮೀನಾಕ್ಷಿ ಭವನ ರಸ್ತೆ, ಕರ್ನಾಟಕ ಸಂಘ, ಎ.ಎ.ಸರ್ಕಲ್, ಅಶೋಕ ಸರ್ಕಲ್‌ವರೆಗೆ ಹಾಗೂ ಎ.ಎ.ಸರ್ಕಲ್‌ನಿಂದ ಟಿ.ಸೀನಪ್ಪಶೆಟ್ಟಿ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಫ್ರೀಡಂ ಪಾರ್ಕ್‌ವರೆಗೆ, ಪೊಲೀಸ್ ಚೌಕಿಯಿಂದ ಉಷಾ ನರ್ಸಿಂಗ್‌ ಹೋಂ ವರೆಗೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿ ಬಜಾರ್ ಮುಖ್ಯರಸ್ತೆ ಮಾರ್ಗವಾಗಿ ಶಿವಪ್ಪನಾಯಕ ವೃತ್ತದವರೆಗೆ ಹಾಗೂ ಶಿವಮೂರ್ತಿ ಸರ್ಕಲ್‌ನಿಂದ ಮಹಾವೀರ ಸರ್ಕಲ್ ಮಾರ್ಗವಾಗಿ ಗಾಂಧಿ ಪಾರ್ಕ್ ವರೆಗೆ, ಅಂಬೇಡ್ಕರ್ ವೃತ್ತದಿಂದ ಶಿವಮೂರ್ತಿ ವೃತ್ತದವರೆಗೆ ಮಾತ್ರವೇ ಅಲ್ಲದೆ, ಶಿವಮೊಗ್ಗ ಮಹಾನಗರ ಪಾಲಿಕೆ ಕಟ್ಟಡ, ಡಿಸಿ ಕಚೇರಿ ಕಟ್ಟಡ, ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಸರ್ಕಲ್‌ನಲ್ಲಿ ಪಾಲಿಕೆ ವತಿಯಿಂದ ವಿಶೇಷ ದೀಪಾಲಂಕಾರ ಏರ್ಪಡಿಸಲಾಗಿದೆ.

Share this article