ಕನ್ನಡಪ್ರಭ ವಾರ್ತೆ ಘಟಪ್ರಭಾ
ಬಿಲಿಷ್ಠ ಭಾರತ ನಿರ್ಮಾಣಕ್ಕೆ ಆಯುರ್ವೇದದ ಪಾತ್ರ ಮಹತ್ವದ್ದಾಗಿದೆ. ಜಗತ್ತಿನ ನಾಲ್ಕನೇ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತದ ಶಕ್ತಿ ಯುವ ಜನತೆಯಾಗಿದೆ, ಯುವಕರು ದುಷ್ಚಟಗಳಿಂದ ದೂರ ಉಳಿದು ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೋಳ್ಳುವ ಮೂಲಕ ದೇಶದ ಪ್ರಾಚೀನ ವೈದ್ಯ ಪದ್ದತಿಯಾದ ಆಯುರ್ವೇದವನ್ನು ಪ್ರೋತ್ಸಾಹಿಸಬೇಕೆಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.ಸ್ಥಳೀಯ ಶ್ರೀ ಜೆ.ಜಿ ಸಹಕಾರಿ ಆಸ್ಪತ್ರೆ ಸೊಸೈಟಿಯ ಸಹಕಾರ ಮಹರ್ಷಿ ಬಿ.ಎ.ಪಾಟೀಲ ಆಯುರ್ವೇದಿಕ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಜತಮಹೋತ್ಸವ, ವಾರ್ಷಿಕೋತ್ಸವ ಸ್ಟೆಲಾರ್-2025 ಹಾಗೂ ವಿದ್ಯಾರ್ಥಿನಿಯರ ವಸತಿಗೃಹ ಅಡಿಗಲ್ಲು ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಪ್ರಾಚೀನ ಆಯುರ್ವೇದ ಪದ್ದತಿಯನ್ನು ಬಿಟ್ಟು, ಅಲೋಪಥಿಕ ಔಷಧಿಗಳ ದಾಸರಾಗುತ್ತಿದ್ದು, ನಮ್ಮ ಜೀವನ ಶೈಲಿಯನ್ನು ಬದಲಿಸುವ ಅವಶ್ಯಕತೆಯಿದೆ. ಊಟವನ್ನು ಔಷಧಿಯಾಗಿ ಸೇವಿಸಬೇಕು. ಆದರೆ ನಮ್ಮ ದುರ್ದೈವ ನಾವು ಔಷಧಿಗಳನ್ನು ಊಟವಾಗಿ ಸೇವೆಸುವ ಕಾಲ ಬಂದಿದೆ ಎಂದು ವಿಷಾಧಿಸಿದರು.75 ವರ್ಷಗಳ ಹಿಂದೆ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಜೆ.ಜಿ.ಕೋ ಆಸ್ಪತ್ರೆ ಈಗ ಹೆಮ್ಮರವಾಗಿ ಬೆಳದಿದೆ. ಸಂಸ್ಥೆಗೆ ಇನ್ನಷ್ಟು ಸೌಲಭ್ಯಗಳ ಅಗತ್ಯವಿದ್ದು, ದೇಶದಲ್ಲಿ ಆಯುರ್ವೇದಿಕ ಆಸ್ಪತ್ರೆ ಹಾಗೂ ಸಂಶೋದನಾ ಕೆಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ₹ 13 ಸಾವಿರ ಕೋಟಿ ಸಹಾಯಧನ ಘೋಷಿಸಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಸಂಸದ ಜಗದೀಶ ಶೇಟ್ಟರ ಮಾತನಾಡಿ, 56 ವರ್ಷಗಳ ಹಿಂದೆ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಬಡವರಿಗಾಗಿ ಪ್ರಾರಂಭಿಸಿದ ಸಣ್ಣ ಆಸ್ಪತ್ರೆ ಬೃಹತಾಕಾರವಾಗಿ ಬೆಳದಿದ್ದು, ಆಸ್ಪತ್ರೆಯ ನಿಸರ್ಗೋಪಚಾರ ಕೇಂದ್ರ ಉತ್ತರ ಕರ್ನಾಟಕದ ಏಕೈಕ ಸುಸಜ್ಜಿತ ಕೇಂದ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಯುರ್ವೇದ ಪ್ರೋತ್ಸಾಹಿಸುವ ಉದ್ದೇಶದಿಂದ ಯೋಗ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸುವಂತೆ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವರಾದ ಎ.ಬಿ.ಪಾಟೀಲ, ಮಾಜಿ ಸಂಸದರಾದ ರಮೇಶ ಕತ್ತಿ, ಮುಖಂಡರಾದ ಆರ್.ಎಸ್.ಎಸ್‌ನ ಅರವಿಂದರಾವ ದೇಶಪಾಂಡೆ ಸಂಸ್ಥೆಯ ಏಳಿಗೆ ಕುರಿತು ಮಾತನಾಡಿದರು.ಸಾನಿದ್ಯವನ್ನು ಘಟಪ್ರಭಾ ಕೆಂಪಯ್ಯಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಆಸ್ಪತ್ರೆಯ ಮುಂದಿನ ವರ್ಷ ಅಮೃತ ಮಹೋತ್ಸವ ಆಚರಿಸುತ್ತಿರುವ ನಿಮಿತ್ತ 75*75 ಒಟ್ಟು 5625 ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯ ಆವರಣದಲ್ಲಿ ವಿದ್ಯಾರ್ಥಿನಿಯರ ವಸತಿ ಗೃಹಗಳ ಅಡಿಗಲ್ಲು ಸಮಾರಂಭವನ್ನು ನೆರವೇರಿಸಲಾಯಿತು.
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಅಪಯ್ಯ ಬಡಕುಂದ್ರಿ, ಉಪಾಧ್ಯಕ್ಷ ಅನೀಲ ನೇರ್ಲಿ, ಪ್ರಾಂಶುಪಾಲರಾದ ಡಾ.ಜೆ.ಕೆ.ಶರ್ಮಾ, ಆಡಳಿತ ಮಂಡಳಿಯ ಸದಸ್ಯರು, ಎಲ್ಲ ಬೋಧಕ ಮತ್ತು ಬೋಧಕೇತರ ಆಸ್ಪತ್ರೆ ಹಾಗೂ ಆಯುರ್ವೇದಿಕ ಕಾಲೇಜ್ ಸಿಬ್ಬಂದಿ ಸೇರಿ ಅನೇಕರು ಉಪಸ್ಥಿತರಿದ್ದರು.