ಹಾನಗಲ್ಲ: ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಆಯುರ್ವೇದದ ಕೊಡುಗೆ ಅನನ್ಯ, ಈಗ ವೈದ್ಯಕೀಯ ಕ್ಷೇತ್ರ, ವೃತ್ತಿ ಬದಲಾದ ಕಾಲದಲ್ಲಿ ಹೊಸದನ್ನು ತಿಳಿದು ಕಾನೂನು ಚೌಕಟ್ಟಿನಲ್ಲಿ ಸೇವೆ ಸಲ್ಲಿಸುವುದು ಅತ್ಯಂತ ಆವಶ್ಯಕ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ ತಿಳಿಸಿದರು.
ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಈಶ್ವರ ಮಾಳೋದೆ ಅಧ್ಯಕ್ಷತೆವಹಿಸಿ ಮಾತನಾಡಿ, ಅರ್ಹರಲ್ಲದವರು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬೇಡ. ಅಧಿಕೃತ ಪರವಾನಗಿ ಪಡೆದವರಿಗೆ ಮಾತ್ರ ವೈದ್ಯಕೀಯ ಮಾಡಲು ಅರ್ಹತೆ ಇದೆ. ಸುರಕ್ಷಿತ ವೈದ್ಯಕೀಯ ಬೇಕು. ಈಗ ವೈದ್ಯರಲ್ಲಿ ಒಗ್ಗಟ್ಟಿನ ಅಗತ್ಯ ಬಹಳಷ್ಟಿದೆ. ಕಾನೂನುಗಳು ಬಹಳ ಬಿಗಿ ಇವೆ. ಅವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯಲ್ಲಿ ತೃಪ್ತಿಯಿಂದ ಕೆಲಸ ಮಾಡಿ ಎಂದು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ಎನ್.ಆರ್. ದೇಶಪಾಂಡೆ, ವೈದ್ಯಕೀಯ ವೃತ್ತಿಯಲ್ಲಿ ಪ್ರೀತಿ ಸ್ನೇಹಗಳು ಇರಲಿ. ವೈದ್ಯರ ಸಂಘಟನೆ ಗಟ್ಟಿಯಾಗಿರಲು ಸಹಕರಿಸಿ ಎಂದರು.ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರುದ್ರೇಸ್ವಾಮಿ, ಡಾ.ಪಿ.ಕೆ. ಹಿರೇಮಠ, ಡಾ. ಸುನಿಲ ಹಿರೇಮಠ ಅತಿಥಿಗಳಾಗಿದ್ದರು. ಡಾ. ಪ್ರಕಾಶ ಹುಗ್ಗಿಶೆಟ್ಟರ ಸ್ವಾಗತಿಸಿದರು. ಡಾ. ವಿಶ್ವನಾಥ ಪುರಾಣಿಕಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಆರ್. ಕಿತ್ತೂರವ್ಮಠ ವಂದಿಸಿದರು.