ಇಂದಿನಿಂದ ಅಯ್ಯನಗುಡಿ ದನಗಳ ಜಾತ್ರೆ

KannadaprabhaNewsNetwork |  
Published : Jan 12, 2024, 01:46 AM IST
ಪೊಟೋ೧೧ಸಿಪಿಟಿ೨: ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಜ.12ರಂದು ಶುಕ್ರವಾರದಿಂದ ಜ.22ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಜ.12ರಂದು ಶುಕ್ರವಾರದಿಂದ ಜ.22ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

ಅಯ್ಯನಗುಡಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಜಾತ್ರಾ ಮಹೋತ್ಸವ ಮೂರ್ನಾಲ್ಕು ವರ್ಷಗಳಿಂದ ಕಳೆಗುಂದಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬಹುದೊಡ್ಡ ಜಾತ್ರೆ:

ಅಯ್ಯನಗುಡಿ ಜಾತ್ರೆಯಲ್ಲಿ ದನಗಳ ಖರೀದಿ ಹಾಗೂ ಮಾರಾಟದ್ದು ವಿಶೇಷ. ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಸಹಸ್ರಾರು ದನಗಳು ಜಾತ್ರೆಗೆ ಆಗಮಿಸುತ್ತವೆ. ಇನ್ನು ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಹೊರರಾಜ್ಯಗಳಿಂದಲೂ ರಾಸುಗಳು ಆಗಮಿಸುತ್ತವೆ.

ಸಿದ್ಧತೆಗೆ ಸೂಚನೆ:

11 ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದೆ. ಜಾತ್ರೆಗೆ ಆಗಮಿಸುವ ಸಾರ್ವಜನಿಕರು ಹಾಗೂ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಆ್ಯಂಬುಲೆನ್ಸ್, ಪ್ರಥಮ ಚಿಕಿತ್ಸಾ ಕೇಂದ್ರ, ಪಶುಪಾಲನಾ ಇಲಾಖೆಯಿಂದ ರಾಸುಗಳಿಗೆ ಪ್ರಥಮ ಚಿಕಿತ್ಸಾ ಕೇಂದ್ರ, ವಿದ್ಯುತ್ ಅಡಚಣೆಯಾಗದಂತೆ ಕ್ರಮ, ಯಾವುದೇ ಅವಘಡ ಸಂಭವಿಸದಂತೆ ಅಗ್ನಿ ಶಾಮಕ ದಳ ಎಚ್ಚರಿಕೆ ವಹಿಸಬೇಕು ಹಾಗೂ ಜಾತ್ರಾ ಮಹೋತ್ಸಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ಇನ್ನು ಜಾತ್ರಾ ಮಹೋತ್ಸವದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸುವುದರಿಂದ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಮಳಿಗೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ.

ಪುರಾಣ ಪ್ರಸಿದ್ಧ ದೇವಾಲಯ: ಬೆಂ-ಮೈ ಹೆದ್ದಾರಿಯಲ್ಲಿರುವ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಈ ದೇವಾಲಯದಲ್ಲಿ 12 ಸುತ್ತು ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಕೆಂಪು ಕಲ್ಲಿನ ಆಂಜನೇಯ ಮೂರ್ತಿ ವಿಶೇಷ. ಮೈಸೂರು ದಿವಾನರು ದೇವಾಲಯದ ಅಭಿವೃದ್ಧಿಗೆ 10 ಎಕರೆ ಜಮೀನು ನೀಡಿ, ಆಂಜನೇಯ ಮೂರ್ತಿಗೆ ಒಂದು ಚಿನ್ನದಕಣ್ಣು ಹಾಗೂ ಮೀಸೆಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಾಕ್ಸ್................

ಮೂರ್ನಾಲ್ಕು ವರ್ಷದಿಂದ ಕಳೆಗುಂದಿದ್ದ ಜಾತ್ರೆ

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬಹ್ಮರಥೋತ್ಸವಕ್ಕೆ ಹಿಂದೆಲ್ಲ ದೂರದ ಊರುಗಳಿಂದ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಕುಟುಂಬ ಸಮೇತರಾಗಿ ಜನ ಆಗಮಿಸುತ್ತಿದ್ದರು.

ಜಾತ್ರೆ ಆರಂಭಗೊಂಡು ಮುಗಿಯುವವರೆಗೆ ಸಿಕ್ಕ ಸ್ಥಳಗಳಲ್ಲಿ ಬಿಡಾರಹೂಡಿ ಅಲ್ಲೆ ತಂಗುತ್ತಿದ್ದರು. ಸಾವಿರಾರು ರಾಸುಗಳು ಖರೀದಿ ಹಾಗೂ ಮಾರಾಟ ನಡೆಯುತ್ತಿತ್ತು. ಕಳೆದ ಮೂರು ನಾಲ್ಕು ವರ್ಷಗಳಿಂದ ಜಾತ್ರೆ ಕಳೆಗುಂದಿತ್ತು.

ಎರಡು ವರ್ಷ ಕೊರೋನಾ ಸಾಂಕ್ರಾಮಿಕದಿಂದ ಕಾರಣಕ್ಕೆ ಜಾತ್ರೆ ಮೇಲೆ ಕಾರ್ಮೋಡ ಕವಿದಿತ್ತು. ಕಳೆದ ವರ್ಷ ರಾಸುಗಳಿಗೆ ಅಂಟಿದ್ದ ಚರ್ಮಗಂಟು ರೋಗದ ಕಾರಣ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈ ಬಾರಿ ವಿಜೃಂಭಣೆಯ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಬಾಕ್ಸ್‌................

ಇಂದಿನಿಂದಲೇ ವಿವಿಧ ಪೂರ್ಜಾ ಕಾರ್ಯ

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರೆ ಹಾಗೂ ಶ್ರೀಲಕ್ಷ್ಮೀ ವೆಂಕಟೇಶ್ವರ ಬಹ್ಮರಥೋತ್ಸವಕ್ಕೆ ಶುಕ್ರವಾರದಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಳ್ಳಲಿವೆ.

ಜ.12ರಂದು ನಿತ್ಯಾರಾಧನೆ, ಮಂಗಳಸಪ್ನನ, ಮೃತಿಕಾ ಸಂಗ್ರಹಣಾ, ಅಂಕುರಾರ್ಪಣೆ. 13ರಂದು, ಧ್ವಜಾರೋಹಣ, ಭೇರಿತಾಡನ, ಹಂಸವಾಹನೋತ್ಸವ, 14ರಂದು ಮಹಾ ಸುದರ್ಶನ ಹೋಮ, ಶೇಷವಾಹನೋತ್ಸವ, 15ರಂದು ಪ್ರಾಕಾರೋತ್ಸವ ವಿಷ್ಣು ಸಹಸ್ರನಾಮ ಹೋಮ, ಚಂದ್ರಮಂಡಲ ವಾಹನೋತ್ಸವ, ಹನುಮಂತೋತ್ಸವ, 16ರಂದು ಮೂರ್ತಿ ಹೋಮ, ವೈಭವ ವೈರಮುಡಿ ಉತ್ಸವ, 17ರಂದು ಆಂಜನೇಯ ಸಹಸ್ರನಾಮ ಹೋಮ, ಪ್ರಹ್ಲಾದ ಪರಿಪಾಲನೆ, ಗರುಡೊತ್ಸವ, 18ರಂದು ಮಂಟಪೋತ್ಸವ, ಗಜವಾಹನೋತ್ಸವ, ಶ್ರೀಸ್ವಾಮಿಯವರ ತಿರುಕಲ್ಯಾಣೋತ್ಸವ ನಡೆಯಲಿದೆ.

19ರಂದು ಬೆಳಗ್ಗೆ 11.55ರಿಂದ 12.55ಕ್ಕೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥಾರೋಹಣ, ಶ್ರೀಯವರ ಯಾತ್ರಾದಾನ, ಗೋವು ಮತ್ತು ಅಶ್ವಪೂಜೆ, ರಥಯಾತ್ರೆ, ಹೂವಿನಪಲ್ಲಕ್ಕಿ ನಡೆಯಲಿದೆ. 20ರಂದು ಸಮರಭೂಪಾಲವಾಹನ, ಶ್ರೀಯವರ ಶಯನೋತ್ಸವ, 21ರಂದು ಕುದುರೆಯಾಳಿ ಉತ್ಸವ, ವಸಂತೋತ್ಸವ, ಮಹಾಪೂರ್ಣಾಹುತಿ, ಪುಷ್ಪಮುಡಿ ಉತ್ಸವ, 22ರಂದು ಮಹಾಭಿಷೇಕ, ಶಾಂತೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಶ್ರೀಸಾಮಿಯರಿಗೆ ಪುಷ್ಟಯಾಗ ನಡೆಯಲಿದೆ.ಪೊಟೋ೧೧ಸಿಪಿಟಿ೨:

ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ.

ಪೊಟೋ೧೧ಸಿಪಿಟಿ೩:

ಶ್ರೀ ಕೆಂಗಲ್ ಆಂಜನೇಯಸ್ವಾಮಿ ವಿಗ್ರಹ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ