ಹಿರೇಕೆರೂರು: ಈ ಬಾರಿ ರಾಜ್ಯಾದ್ಯಂತ ಸತತವಾಗಿ ಸುರಿದ ಮಳೆಯಿಂದ ರೈತರ ಬಿತ್ತಿದ ಬೆಳೆ ಶೇ. 90ರಷ್ಟು ಹಾಳಾಗಿದ್ದು, ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಸರ್ಕಾರ ಕೂಡಲೇ ರೈತರಿಗೆ ಮಧ್ಯಂತರ ಬೆಳೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಒತ್ತಾಯಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಮಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಂದಿದ್ದು, ರೈತರು ಮಾಡಿದ ಬಿತ್ತನೆ ಬೆಳೆ ಮೊಳಕೆಯ ಸಂದರ್ಭದಲ್ಲಿ ಹಾಳಾಗಿದೆ. ಇನ್ನು ಕೆಲವು ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬೆಳೆ ಹಾಳಾಗಿದ್ದು, ರೈತ ಸಮುದಾಯ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಸಾಲ ಮಾಡಿ ಬೀಜ ಗೊಬ್ಬರ ತಂದು ಬಿತ್ತಿದ ಬೆಳೆ ಹಾಳಾಗಿ ರೈತರು ಕಂಗೆಟ್ಟಿದ್ದು, ಅಧಿಕಾರಿಗಳು ರೈತರ ಸಹಾಯಕ್ಕೆ ಧಾವಿಸಬೇಕು. ಸರ್ಕಾರ ಅಧಿಕಾರಿಗಳಿಗೆ ಪರಿಹಾರ ನೀಡುವಲ್ಲಿ ಸೂಕ್ತ ಸೂಚನೆಗಳನ್ನು ನೀಡಬೇಕು ಎಂದರು.ರಾಜ್ಯದಲ್ಲಿ ಕಳಪೆ ಬೀಜದ ಹಾವಳಿ ಹೆಚ್ಚಾಗಿದ್ದು, ಕೃಷಿ ಇಲಾಖೆ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಕೃಷಿ ಇಲಾಖೆಯ ಜಾಗೃತ ದಳ ಏನು ಮಾಡುತ್ತಿದೆ. ಕಳಪೆ ಬೀಜ ಮಾರುವ ಜಾಲವನ್ನು ನಿಯಂತ್ರಿಸುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ. ಇದರ ಜತೆಗೆ ಗೊಬ್ಬರ ಹಾಗೂ ಔಷಧ ಕೂಡ ಕಳಪೆಯಾಗಿದ್ದು, ಡಿಎಪಿ ಗೊಬ್ಬರವನ್ನು ನೀರಿನಲ್ಲಿ ಹಾಕಿದರೆ ಮರಳು ಬರುತ್ತಿದೆ. ಕೃಷಿ ಅಧಿಕಾರಿಗಳು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಳಪೆ ದಂಧೆಯ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ರೈತರು ಒಂದು ಕಡೆ ಮಳೆ ಹಾನಿ ಅನುಭವಿಸುತ್ತಿದ್ದರೆ, ಇನ್ನೊಂದು ಕಡೆ ಕಳಪೆ ಬಿತ್ತನೆ ಬೀಜ, ಗೊಬ್ಬರ ಮತ್ತು ಔಷಧದಿಂದ ಆಗುತ್ತಿರುವ ತೊಂದರೆ ಅನುಭವಿಸುವಂತಾಗಿದೆ ಎಂದರು.ರೈತರ ಹೊಲಗದ್ದೆಗಳಲ್ಲಿ ಮುಳ್ಳು ಸಜ್ಜಿ ಬೆಳೆದು ಬೆಳೆಗಿಂತ ಹೆಚ್ಚು ಎದ್ದು ಕಾಣುತ್ತಿದೆ. ರೈತರು ಮುಳ್ಳು ಸಜ್ಜಿ ನಿಯಂತ್ರಣ ಮಾಡಲು ಪರದಾಡುತ್ತಿದ್ದಾರೆ. ಈ ಹಂತದಲ್ಲಿ ನಿಯಂತ್ರಣ ಮಾಡದಿದ್ದಲ್ಲಿ ಮುಂದೆ ನಿಯಂತ್ರಣ ಮಾಡುವುದು ಕಷ್ಟಸಾಧ್ಯ. ಇದರ ಬಗ್ಗೆ ಕೃಷಿ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಮುಳ್ಳು ಸಜ್ಜಿ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಕಂಡು ಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಿ ಮಧ್ಯಂತರ ಬೆಳೆ ಪರಿಹಾರ ಹಾಗೂ ಬೆಳೆವಿಮೆ ನೀಡುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.