ಗ್ರಾಪಂ ಆವರಣದಲ್ಲಿ ಪ್ರತಿಭಟನೆ । ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯ । ಪರಿಹಾರ ಭರವಸೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುರಸ್ತೆ, ಚರಂಡಿ ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಬಿ.ಜಿ.ಕೆರೆ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ನಿವಾಸಿಗಳು ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಚರಂಡಿ ಸ್ವಚ್ಚಗೊಳಿಸಿಲ್ಲ ಪರಿಣಾಮವಾಗಿ ಚರಂಡಿಗಳು ಗಬ್ಬೆದ್ದು ನಾರುತ್ತಿದೆ.ಕೆಲವೆಡೆ ಚರಂಡಿ ಬ್ಲಾಕ್ ಆಗಿ ನೀರು ಸರಾಗವಾಗಿ ಹರಿಯದೆ ಕೊಚ್ಚೆ ಗುಂಡಿಯಂತಾಗಿದ್ದು ಇಡೀ ಗ್ರಾಮ ಸೊಳ್ಳೆಗಳ ಆವಾಸಸ್ಥಾನವಾಗಿದೆ. ಹೀಗಿದ್ದರೂ ಸಂಬಂದಿಸಿದ ಪಿಡಿಒ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.ಗ್ರಾಮದ ನಾಲ್ಕು ವಾರ್ಡುಗಳ ಪೈಕಿ ಅಷ್ಟೂ ವಾರ್ಡುಗಳು ಸ್ವಚ್ಛತೆ ಇಲ್ಲದಾಗಿವೆ. ಬ್ಲೀಚಿಂಗ್ ಮತ್ತು ಪೆನಾಯಿಲ್ ಕಾಣದೆ ಎಷ್ಟೋ ವರ್ಷಗಳ ಕಳೆದಿದ್ದರೂ ಪೆನಾಯಿಲ್ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಪಿಡಿಒ ವಾರಕ್ಕೆ ಒಮ್ಮೆಯಾದರೂ ಪಂಚಾಯಿತಿ ಕಡೆ ಮುಖ ಮಾಡುತ್ತಿಲ್ಲ. ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಕೇವಲ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದ ಮೂರು ಘಟಕಗಳು ಸ್ಥಗಿತಗೊಂಡು ಎಷ್ಟೋ ವರ್ಷಗಳು ಕಳೆದಿವೆ. ಈಗಿದ್ದರೂ ಸಂಬಂದಿಸಿದ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಸ ವಿಲೇವಾರಿ ಇಲ್ಲದೆ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಇಡೀ ಗ್ರಾಮವೇ ಸೊಳ್ಳೆಗಳ ಹಾವಳಿ ಹೆಚ್ಚಿದೆ. ರಾತ್ರಿ ವೇಳೆ ನಿದ್ರೆ ಮಾಡಲು ಆಗದಂತಹ ಸ್ಥಿತಿ ಎದುರಾಗಿದೆ. ಲೈಬ್ರರಿ ಇದ್ದರೂ ಇಲ್ಲದಂತಾಗಿದೆ. ಸದಸ್ಯರು ವಾರ್ಡುಗಳ ಕುರಿತು ಗಮನ ಹರಿಸುತ್ತಿಲ್ಲ. ಸ್ವಚ್ಛತೆಗೆ ಸಂಬಂಧಿಸಿದಂತೆ ಹಲವು ಬಾರಿ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಸಮಸ್ಯೆ ಪರಿಹಾರವಾಗದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಧ್ಯಕ್ಷ ಎಸ್.ಜಯಣ್ಣ, ಪಿಡಿಒ ಮಲ್ಲಿಕಾರ್ಜುನ ಸಮಸ್ಯೆ ಸರಿ ಪಡಿಸುವ ಭರವಸೆ ನೀಡಿದರೂ ಹಿಂದೆ ಸರಿಯದ ಯುವಕರಿಗೆ ಪಿಎಸ್‌ಐ ಪಾಂಡುರಂಗ ಆಗಮಿಸಿ ಹದಿನೈದು ದಿನಗಳ ಒಳಗೆ ಗ್ರಾಮದಲ್ಲಿ ಸ್ವಚ್ಛತೆ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಸ್ಥಳದಲ್ಲಿ ದರ್ಶನ.ಮಾರುತಿ. ಬಸವರಾಜ, ಮಹಾಂತೇಶ್, ಗಿರೀಶ್, ರಮೇಶ, ತಿಪ್ಪೇಸ್ವಾಮಿ. ಬಸವರಾಜ, ಅಭಿ. ಸುದೀಪ, ಶಂಕರ ಮೂರ್ತಿ, ನಾಗೇಶ್, ಓಂಕಾರ ಮೂರ್ತಿ, ಗಣೇಶ, ಮಹೇಶ್, ಮಂಜು, ದರ್ಶನ, ತಿಪ್ಪೇಶ್, ಅಭಿಲಾಷ್ ಸೇರಿದಂತೆ ಹಲವರು ಇದ್ದರು.