ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಹೋರಾಟ ಬೆಂಬಿಸಿ ಸಂವಿಧಾನ ಸಂರಕ್ಷಣಾ ಸಮಿತಿ, ನಾಗರಿಕ ಮತ ಕಾವಲು ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಪ್ರತಿಭಟಿಸಲಾಯಿತು.ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ದೇಶದ ಮೂಲನಿವಾಸಿಗಳು ಹಾಗೂ ಹಿಂದುಳಿದ ಸಮುದಾಯಗಳ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೇಂದ್ರ ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರ ಖಂಡಿಸಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ದೆಹಲಿ ಪೊಲೀಸರ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು.ಪ್ರಜಾಪ್ರಭುತ್ವದ ಪ್ರಮುಖ ಆಶಯಗಳಲ್ಲಿ ಒಂದಾದ ಪ್ರತಿಭಟಿಸುವ ಮತ್ತು ಹೋರಾಟ ನಡೆಸುವ ಹಕ್ಕನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಕರ್ನಾಟಕ ಸಹಿಸುವುದಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಂವಿಧಾನ ಸಂರಕ್ಷಣಾ ಪಡೆಯ ವಲಯ ಸಂಯೋಜಕ ಉಮೇಶ್ ಬಿ. ನೂರಲಕುಪ್ಪೆ, ಜಿಲ್ಲಾ ಸಂಚಾಲಕ ಬಸವರಾಜ್, ಪ್ರಗತಿಪರ ಮುಖಂಡ ಅಕ್ಬರ್ ಪಾಷ, ವೆಂಕಟಸ್ವಾಮಿ, ಯುವ ಮುಖಂಡ ಎಚ್.ಸಿ. ನರಸಿಂಹಮೂರ್ತಿ, ಪ್ರಗತಿಪರ ರೈತ ಮಲಾರ ಪುಟ್ಟಯ್ಯ, ದಸಂಸ ದೊಡ್ಡ ಸಿದ್ದು, ದಸಂಸ ಮುಖಂಡ ಚಾ. ನಂಜುಂಡಮೂರ್ತಿ, ಸೋಗಳ್ಳಿ ಶಿವಣ್ಣ, ಸರಗೂರು ಶಿವಣ್ಣ, ಚನ್ನಿಪುರ ಮಲ್ಲೇಶ್, ದಸಂಸ ನಿಂಗರಾಜ್, ಕಾಡುಮನೆ ಪ್ರಸನ್ನ, ರಾಜೇಶ್, ನಂಜಪ್ಪ, ವಕೀಲ ಸೋಮ್ ಶೇಖರ್, ಉಮೇಶ್, ಹೆಬ್ಬಲಗುಪ್ಪೆ ರವಿ, ದಾಸಪ್ಪ, ಮಟಕೆರೆ ಶಿವರಾಜ್, ಸುರೇಶ್ ಮೊದಲಾದವು ಇದ್ದರು.