ಲಕ್ಷಾಂತರ ಮಂದಿಗೆ ಬಾಹುಬಲಿ ಆಸ್ಪತ್ರೆ ಆಸರೆ

KannadaprabhaNewsNetwork | Published : Feb 29, 2024 2:00 AM

ಸಾರಾಂಶ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆರಂಭಿಸಿದ ಬಾಹುಬಲಿ ಆಸ್ಪತ್ರೆ ಇಂದು ಲಕ್ಷಾಂತರ ಮಕ್ಕಳಿಗೆ, ರೋಗಿಗಳಿಗೆ ಅಸರೆಯಾಗಿದೆ ಎಂದು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್ ಹೇಳಿದರು. ಚನ್ನರಾಯಪಟ್ಟಣದಲ್ಲಿ ಬಾಹುಬಲಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.

ವೈದ್ಯಾಧಿಕಾರಿ ಯುವರಾಜ್‌ । ಗರ್ಭಕಂಠ ಕ್ಯಾನ್ಸರ್ ತಪಾಸಣೆಚನ್ನರಾಯಪಟ್ಟಣ: ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆರಂಭಿಸಿದ ಬಾಹುಬಲಿ ಆಸ್ಪತ್ರೆ ಇಂದು ಲಕ್ಷಾಂತರ ಮಕ್ಕಳಿಗೆ, ರೋಗಿಗಳಿಗೆ ಅಸರೆಯಾಗಿದೆ ಎಂದು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್ ಹೇಳಿದರು.

ತಾಲೂಕಿನ ಶ್ರವಣಬೆಳಗೊಳ ಸಮೀಪದ ಶ್ರೀ ಧವಲತೀರ್ಥಂನಲ್ಲಿರುವ ಬಾಹುಬಲಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಆರೋಗ್ಯದ ಕಾಳಜಿಯಿಂದ ಶ್ರೀಗಳು ಇಪ್ಪತ್ತು ವರ್ಷಗಳ ಹಿಂದೆ ಬಾಹುಬಲಿ ಆಸ್ಪತ್ರೆ ತೆರೆದು ಸೇವೆ ನೀಡುತ್ತಿರುವುದು ಶ್ಲಾಘನೀಯವಾದದ್ದು. ಈಗಾಗಲೇ ಎರಡು ಲಕ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯೊಂದಿಗೆ ಔಷಧೋಪಚಾರ ನೀಡುತ್ತಿರುವುದು ವಿಶೇಷವಾಗಿದೆ. ಹಿಂದಿನ ಶ್ರೀಗಳ ಮಾರ್ಗದರ್ಶನವನ್ನು ಈಗಿನ ಅಭಿನವ ಚಾರುಶ್ರೀ ಮುಂದುವರಿಸಿಕೊಂಡು, ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಮಹಿಳೆಯರಲ್ಲಿ ಇತ್ತೀಚೆಗೆ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹಾಗೂ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಜೈನ ಮಠದ ವತಿಯಿಂದ ಈ ರೀತಿಯ ಶಿಬಿರಗಳನ್ನು ಆಯೋಜಿಸುತ್ತಿರುವ ಸಾಮಾಜಿಕ ಕಳಕಳಿಯಾಗಿದೆ ಎಂದರು.

ಎಸ್‌ಡಿಜೆಎಂಐಸಿ ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಎಸ್.ಪಿ.ಮಹೇಶ್, ಹೆಚ್ಚುವರಿ ಕಾರ್ಯದರ್ಶಿ ಜಿ.ಡಿ.ಪಾರ್ಶ್ವನಾಥ, ಶಿಬಿರದ ಪರೀಕ್ಷಕರಾದ ಡಾ. ಕೆ.ಕೆ.ಶ್ರುತಿ ಮತ್ತು ಡಾ. ಸಿ.ವಿ.ಸುನಿಲ್ ಹಾಗೂ ಬಾಹುಬಲಿ ಆಸ್ಪತ್ರೆಯ ಡಾ. ರಾಮಚಂದ್ರ, ಡಾ. ಕಾವ್ಯ, ಶೃತಕೇವಲಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಪುಟ್ಟರಾಜ್, ವ್ಯವಸ್ಥಾಪಕ ಬಾಹುಬಲಿ ಇದ್ದರು.

ಶಿಬಿರದಲ್ಲಿ ಗರ್ಬಿಣಿ ಮಹಿಳೆಯರ ತಪಾಸಣೆ, ಗರ್ಭಧಾರಣೆಯ ನಿರ್ವಹಣೆ ಮೊದಲಾದ ಖಾಯಿಲೆಗಳ ತಪಾಸಣೆ ನಡೆಸಲಾಯಿತು.ಶ್ರವಣಬೆಳಗೊಳದ ಬಾಹುಬಲಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಉಚಿತ ಆರೋಗ್ಯ ಶಿಬಿರಕ್ಕೆ ಶ್ರವಣಬೆಳಗೊಳ ವೈದ್ಯಾಧಿಕಾರಿ ಡಾ. ಬಿ. ಆರ್.ಯುವರಾಜ್ ಚಾಲನೆ ನೀಡಿದರು.

Share this article