ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸುವ ಪಣ ತೊಟ್ಟು ರಸ್ತೆ, ವಿದ್ಯುತ್, ನೀರಾವರಿ ಸೇರಿದಂತೆ ಎಲ್ಲ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಮಮದಾಪುರ-ದೂಡಿಹಾಳ ಮುಖಾಂತರ ರಾಷ್ಟ್ರೀಯ ಹೆದ್ದಾರಿ-೨೧೮ಕ್ಕೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಮದಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಶೇಗುಣಸಿಯಿಂದ ಮಮದಾಪುರವರೆಗೆ ಸುಮಾರು ೯.೫ ಕಿಮೀ. ರಸ್ತೆಯನ್ನು ₹೧೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮಮದಾಪುರದಿಂದ ೨೧೮ರವರೆಗೆ ೧೧.೬ ಕಿಮೀ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬಬಲೇಶ್ವರ ಕ್ಷೇತ್ರದಲ್ಲಿಯೇ ಮಮದಾಪುರ ಹೋಬಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗಿದೆ ಎಂದರು.ದಶಕಗಳ ಕನಸಾಗಿದ್ದ ಮಮದಾಪುರ ಕೆರೆ ತುಂಬುವುದು, ಕಳೆದ ೨೦೧೩ ರಿಂದ ೨೦೧೮ರ ಅವಧಿಯಲ್ಲಿ ನಾನು ಜಲಸಂಪನ್ಮೂಲ ಸಚಿವನಾದ ಮೇಲೆ ಮಮದಾಪುರ ಕೆರೆ ಹೂಳು ತೆಗೆದು, ಮನಸಿದ್ದರೆ ಮಾರ್ಗ ಎಂಬ ಧೋರಣೆಯೊಂದಿಗೆ ಸಿದ್ದೇಶ್ವರ ಶ್ರೀಗಳ ಪ್ರೇರಣೆಯೊಂದಿಗೆ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗಿದೆ ಎಂದು ತಿಳಿಸಿದರು.
ಮಮದಾಪುರ ಕೆರೆ ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದಲ್ಲಿ ಕೃಷಿ ಅಭಿವೃದ್ಧಿಯಾಗಿ, ರೈತರಿಗೆ ಅನುಕೂಲವಾಗಿದೆ. ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮಮದಾಪುರದಲ್ಲಿನ ೧೬೦೦ ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಳಿಕ, ಸೈನ್ಸ್ ಮ್ಯೂಸಿಯಂ, ಮಕ್ಕಳ ಚಟುವಟಿಕೆಗಾಗಿ ಪ್ರತ್ಯೇಕ ತಾಣ ಸೇರಿದಂತೆ ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲಾಗುವುದು. ಈ ಅರಣ್ಯ ಪ್ರದೇಶವನ್ನು ಪ್ರಕೃತಿ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ ಮಾಡಲಾಗುತ್ತಿದೆ. ಪ್ರಕೃತಿಯಿಂದ ಬಂದಿದ್ದೇನೆ, ನಿಸರ್ಗದಲ್ಲಿ ವಿಲೀನವಾಗಬೇಕೆಂಬ ಸಿದ್ದೇಶ್ವರ ಶ್ರೀಗಳ ಆದೇಶಕ್ಕನುಗುಣವಾಗಿ ಶ್ರೀಗಳನ್ನು ಪ್ರಕೃತಿಯಲ್ಲಿ ಕಾಣುವ ನಿಟ್ಟಿನಲ್ಲಿ ಸ್ವಚ್ಛ ಸುಂದರ ಪ್ರಕೃತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.ದೇವರೆಗೆನ್ನೂರದಿಂದ ಕೊಡಬಾಗಿ ಕ್ರಾಸ್ ೬ ಕಿಮೀ. ರಸ್ತೆಗೆ ₹೯ ಕೋಟಿ ವೆಚ್ಚ ಮಾಡಲಾಗಿದೆ. ಕಂಬಾಗಿ-ಮಮದಾಪುರ ೬ ಕಿಮೀ ರಸ್ತಗೆ ₹೮ ಕೋಟಿ ವೆಚ್ಚ ಮಾಡಲಾಗಿದೆ. ಹೀಗೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆಯನ್ನು ನೀಡಿದರು.
ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಉದ್ಯಮಿ ಸದಾಶಿವ ಚಿಕ್ಕರೆಡ್ಡಿ ಅವರು ನೀಡಿದ ಒಂದು ಸಾವಿರ ನೋಟಬುಕ್ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಇಇ ಸಿ.ಬಿ.ಚಿಕ್ಕಲಕಿ, ಮಧ್ವರಾಜ್ ಕುಲಕರ್ಣಿ, ಕೃಷ್ಣಾಜೀ ಕುಲಕರ್ಣಿ, ಮುಖಂಡರಾದ ಬಸವರಾಜ ದೇಸಾಯಿ, ಡಾ. ಕೆ.ಎಚ್. ಮುಂಬಾರೆಡ್ಡಿ, ಬಿ.ಡಿ.ಪಾಟೀಲ, ಕುಮಾರ ದೇಸಾಯಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ, ಉಮೇಶ ಮಲ್ಲಣ್ಣನವರ, ಎಚ್.ಬಿ.ಹರನಟ್ಟಿ, ಚಂದ್ರಶೇಖರ ಪೂಜಾರಿ, ಸೋಮನಾಥ ಬಿರಾದಾರ ಉಪಸ್ಥಿತರಿದ್ದರು.