ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರು ಸುದೀರ್ಘ ಕಾಲ ಕೇಂದ್ರ ಸಚಿವರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನರಾಂ ೧೧೮ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಾಬು ಜಗಜೀವನರಾಂ ಕೇಂದ್ರದಲ್ಲಿ ಸಚಿವರಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಅಲ್ಲದೆ ಎಲ್ಲ ಕಾರ್ಮಿಕರಿಗು ಅನುಕೂಲವಾಗುವ ಸುಧಾರಣೆ ಜಾರಿಗೆ ತಂದರು. ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಬಾಬೂಕ ಎಸ್ಟಿ, ಎಸ್ಟಿಗೆ ಆಯೋಗವನ್ನು ನೇಮಕ ಮಾಡಿದರು. ವಿಮಾನಯಾನ ಸಚಿವರಾಗಿದ್ದ ಅವಧಿಯಲ್ಲಿ ಖಾಸಗೀಕರಣಗೊಂಡಿದ್ದ ವಿಮಾನಸೇವೆ ರಾಷ್ಟ್ರೀಕರಣಗೊಳಿಸಿದರು. ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದ್ದರು. ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬು ಜಗಜೀವನರಾಂ ಕಾರ್ಮಿಕರ ಹಿತರಕ್ಷಣೆಗಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದರು. ಹಲವಾರು ಖಾತೆಗಳನ್ನು ಕೇಂದ್ರದಲ್ಲಿ ನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು. ಅವರ ಕರ್ತವ್ಯ ನಡೆ ನುಡಿಯನ್ನು ಎಲ್ಲರು ಅನುಸರಿಸಬೇಕಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಸಂದೇಶ ವಾಚಿಸಿದರು. ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಬಾಬು ಜಗಜೀವನರಾಂ ರಕ್ಷಣಾ ಸಚಿವರು, ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಿದಲ್ಲದೇ ಹಲವು ವಿನೂತನ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಹಸಿರುಕ್ರಾಂತಿಯ ಹರಿಕಾರರೆಂದೇ ಕರೆಯಲ್ಪಟ್ಟರು ಎಂದರು.ಮುಖ್ಯ ಭಾಷಣ ಮಾಡಿದ ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದ ಬಾಬು ಜಗಜೀವನ್ ರಾಂ ಶೋಷಿತ ವರ್ಗಗಳ ಏಳಿಗೆಗಾಗಿ ಅಪಾರ ಶ್ರಮಿಸಿದ್ದಾರೆ. ೨೭ನೇ ವಯಸ್ಸಿಗೆ ಸಂಸದರಾಗಿದ್ದ ಬಾಬೂಜಿ ಸುದೀರ್ಘ ಕಾಲ ರಾಜಕೀಯ ಅಧಿಕಾರ ಅನುಭವಿಸಿದ್ದರು. ರೈಲ್ವೆ, ಸಂಪರ್ಕ ಸಚಿವರಾಗಿದ್ದ ವೇಳೆ ಹೊಸ ಸಾಧನಾ ವ್ಯವಸ್ಥೆಗಳನ್ನು ಅಂದೇ ಪರಿಚಯಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್, ನಗರಸಭಾ ಸದಸ್ಯರಾದ ನಾಗರಾಜು, ಸ್ವಾಮಿ, ಚೂಡಾ ಸದಸ್ಯ ಪುಟ್ಟಸ್ವಾಮಿ, ಎಸ್ಪಿ ಡಾ.ಕವಿತಾ, ಎಡಿಸಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಎನ್. ಮುನಿರಾಜು, ತಹಸೀಲ್ದಾರ್ ಗಿರಿಜಾ, ಜಿಪಂ ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್, ನಗರಸಭಾ ಆಯುಕ್ತ ಎಸ್.ವಿ. ರಾಮದಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅದ್ಧೂರಿ ಬಾಬೂಜಿ ಭಾವಚಿತ್ರದ ಮೆರವಣಿಗೆಗೆ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಅಂಬೇಡ್ಕರ್ ಪುತ್ಥಳಿಗೆ ಶಾಸಕ ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಇತರೆ ಗಣ್ಯರು, ಮುಖಂಡರು ಮಾಲಾರ್ಪಣೆ ಮಾಡಿದರು.