ತುಮಕೂರಲ್ಲಿ ಶೀಘ್ರ ಬಾಬೂಜಿ ಪ್ರತಿಮೆ ಸ್ಥಾಪನೆ

KannadaprabhaNewsNetwork |  
Published : Jul 06, 2025, 11:48 PM IST

ಸಾರಾಂಶ

ನಗರದಲ್ಲಿ ಬಾಬು ಜಗಜೀವನ್ ರಾಂ ರವರ ಪ್ರತಿಮೆ ಪ್ರತಿಷ್ಠಾಪನೆಗಾಗಿ ಅಗತ್ಯವಿರುವ ಪ್ರತಿಮೆಯನ್ನು ನಾನೇ ಕೊಡುಗೆಯಾಗಿ ನೀಡುತ್ತೇನೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ನಗರದಲ್ಲಿ ಬಾಬು ಜಗಜೀವನ್ ರಾಂ ರವರ ಪ್ರತಿಮೆ ಪ್ರತಿಷ್ಠಾಪನೆಗಾಗಿ ಅಗತ್ಯವಿರುವ ಪ್ರತಿಮೆಯನ್ನು ನಾನೇ ಕೊಡುಗೆಯಾಗಿ ನೀಡುತ್ತೇನೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಭಾನುವಾರ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 39ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪುಷ್ಪನಮನದ ಮೂಲಕ ಗೌರವ ಸಮರ್ಪಣೆ ಸಲ್ಲಿಸಿ ಮಾತನಾಡಿದರು.

ನಗರದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಯನ್ನು ಸ್ಥಾಪಿಸಲು, ಪ್ರತಿಮೆಯನ್ನು ನಾನೇ ಕೊಡುಗೆಯಾಗಿ ನೀಡುತ್ತೇನೆ. ಸಮುದಾಯ ಭವನ ಮತ್ತು ಪ್ರತಿಮೆಯನ್ನು ಸ್ಥಾಪಿಸುವ ಕೆಲಸವನ್ನು ಬಹಳ ವೇಗವಾಗಿ ಮಾಡಬೇಕಿದೆ. ಐದು ಎಕರೆ ಜಾಗವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸ್ವಾತಂತ್ರ‍್ಯ ಹೋರಾಟದಲ್ಲಿ ಉಳ್ಳವರು ಮುಂಚೂಣಿಯಲ್ಲಿ ಇರಲಿಲ್ಲ. ಶೋಷಿತ ಸಮುದಾಯದ ಜನರು ಹೆಚ್ಚಾಗಿ ಮುಂಚೂಣಿಯಲ್ಲಿದ್ದರು, ಬಾಬು ಜಗಜೀವನ್ ರಾಮ್ ಅವರು ನಾಯಕತ್ವ ವಹಿಸಿದ್ದರು. ಸ್ವಾತಂತ್ರ‍್ಯ ನೀಡುವುದಾದರೆ ಜನರ ಆಶೋತ್ತರಗಳನ್ನು ಈಡೇರಿಸಬೇಕು ಎಂದು ಬಾಬು ಜಗಜೀವನ್ ರಾಮ್ ಅವರು ಧೈರ್ಯವಾಗಿ ಹೇಳಿದ್ದನ್ನು ನಾವೆಲ್ಲ ಸ್ಮರಿಸಬೇಕು ಎಂದರು.

ದೇಶದ ಮಹಾನ್ ನಾಯಕರ ಹುಟ್ಟುಹಬ್ಬ, ಪುಣ್ಯಸ್ಮರಣೆಯ ಆಚರಣೆಗಳು, ಅವರ ಆದರ್ಶಗಳನ್ನು ಸ್ಮರಿಸಿಕೊಳ್ಳಲು ಉಪಯೋಗವಾಗುತ್ತವೆ. ಅವರ ಜೀವನ ಚರಿತ್ರೆಯನ್ನು ನಾವು ಸ್ಮರಿಸಿದರೆ ಮುಂದಿನ ಪೀಳಿಗೆಗೂ ಗೊತ್ತಾಗುತ್ತದೆ. ನಾವೆಲ್ಲ ಹೋರಾಟದ ದಾರಿಯಲ್ಲಿ ಹೋಗುತ್ತಿದ್ದೇವೆ. ಇದಕ್ಕೆ ಬಾಬು ಜಗಜೀವನ್ ರಾಮ್ ಅವರ ಸ್ಮರಣೆ ನಮಗೆ ದಾರಿದೀಪವಾಗಬೇಕು ಎಂದು ಹೇಳಿದರು.

ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು, ಒಂದೊತ್ತಿನ ಊಟ ಕಡಿಮೆಯಾದರು ಪರವಾಗಿಲ್ಲ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ, ಇದರಿಂದ ಮುಂದಿನ ಪೀಳಿಗೆಯ ಜೀವನ ಬದಲಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿಗೆ ನಮ್ಮ ಮಕ್ಕಳನ್ನು ತಯಾರು ಮಾಡಬೇಕು ಎಂದು ಹೇಳಿದರು. ದೇಶದಲ್ಲಿರುವ ಜಾತಿ ಸಂಘಗಳು ಹೊರ ದೇಶಗಳಲ್ಲಿ ಹುಟ್ಟಿಕೊಂಡಿವೆ. ಅಲ್ಲಿಯೂ ಜಾತಿ ಸಮ್ಮೇಳನ ನಡೆಯುತ್ತಿವೆ ಎಂದು ಬೇಸರಿಸಿದರು ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಹಿಂದಿನ ಸರ್ಕಾರ ಯಾವ ರೀತಿ ದಾರಿ ತಪ್ಪಿಸಿದರು ಎಂಬುದು ನಮಗೆ ಗೊತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ನೇಮಕವಾಗಬೇಕಿದೆ, ಪೊಲೀಸ್ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇವೆ, ಕಾರಾಗೃಹದಲ್ಲಿ ಶೇ. 38ರಷ್ಟು ಹುದ್ದೆಗಳು ಖಾಲಿ ಇವೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ನಡೆಯಬೇಕಿದೆ, ಒಳ ಮೀಸಲಾತಿ ತೀರ್ಮಾನ ಆಗುವವರೆಗೂ ನೇಮಕಾತಿ ಹಾಗೂ ಮುಂಬಡ್ತಿ ನೀಡುವುದಿಲ್ಲ ಎಂಬ ಕಠಿಣ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು.ಜಿ, ಅಪರ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ