ನವಜಾತ ಶಿಶು ಅಪಹರಣ: ಮೂವರ ಬಂಧನ

KannadaprabhaNewsNetwork |  
Published : Nov 28, 2024, 12:32 AM IST
ಫೋಟೋ- ಆಸ್ಪತ್ರೆ 4ಅಪಹರಣಕ್ಕೊಳಗಾದ ಮಗುವನ್ನು 24 ಗಂಟೆಯಲ್ಲೇ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಕಲಬುರಗಿ ಪೊಲೀಸ್‌ ಕಮೀಶ್ನರ್‌ ಡಾ. ಶರಣಪ್ಪ ಹಾಗೂ ನಗರ ಪೊಲೀಸ್‌ ತಂಡ | Kannada Prabha

ಸಾರಾಂಶ

ಸಂತಾನಹೀನ ದಂಪತಿ ಜೊತೆ ಐವತ್ತು ಸಾವಿರ ಡೀಲ್‌ ಕುದುರಿಸಿದ್ದ ಆರೋಪಿಗಳು. ಕಲಬುರಗಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ. ಮೂವರು ಮನೆ ಕೆಲಸದವರು ಸೇರಿ ಮಗು ಅಪಹರಣ ಮಾಡಿರೋದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ ಮಾಹಿತಿ.

ಕನ್ನಡಪ್ರಭ ವಾರ್ತೆ ಕಲಬುರಗಿ

ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಸೋಮವಾರ ಮಧ್ಯಾಹ್ನ ಇಲ್ಲಿನ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ಘಟಕದಿಂದ ನವಜಾತ ಗಂಡು ಶಿಶು ಅಪಹರಿಸಿ ಪರಾರಿಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಲಬುರಗಿ ನಗರ ಪೊಲೀಸರು ಅಪಹರಣಕಾರರ ಬೆನ್ನು ಬಿದ್ದು 24 ಗಂಟೆಯಲ್ಲೇ ಕಂದಮ್ಮ ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ. ಹುಟ್ಟಿದ 8 ಗಂಟೆಗಳಲ್ಲೇ ತಾಯಿ ಮಡಿಲಿನಿಂದ ಅಪಹರಣವಾಗಿದ್ದ ಹಸುಗೂಸು ಸುರಕ್ಷಿತವಾಗಿ ಹೆತ್ತವ್ವನ ಒಡಲು ಸೇರಿದೆ.

ಮೂವರು ಮಹಿಳೆಯರ ಸೆರೆ:

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡ ಬಗೆಯನ್ನು ಮಾಧ್ಯಮದವರಿಗೆ ವಿವರಿಸಿದ ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ, ಮೂವರು ಮನೆ ಕೆಲಸದವರು ಸೇರಿ ಮಗು ಅಪಹರಣ ಮಾಡಿರೋದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರಕರಣದಲ್ಲಿ ಎಂಸ್‌ಕೆ ಮಿಲ್‌ ಬಡಾವಣೆಯ ನಿವಾಸಿಗಳಾದ ಮನೆ ಕೆಲಸದ ವೃತ್ತಿಯಲ್ಲಿರುವ ಉಮೇರಾ (30), ನಸರಿನ್‌ ಬಾನು (32) ಹಾಗೂ ಫಾತಿಮಾ (35) ಈ ಮೂವರು ಮಹಿಳೆಯರನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾಗಿ ಹೇಳಿದ್ದಾರೆ.50 ಸಾವಿರಕ್ಕೆ ಡೀಲ್- ಮಗು ಅಪಹರಣಕ್ಕೆ ಸ್ಕೆಚ್‌!

ಸಂತಾನವಿಲ್ಲದೆ ಪರಿತಪಿಸುತ್ತಿದ್ದ ದಂಪತಿ ಜೋಡಿಗೆ ಮಗು ಬೇಕಾಗಿತ್ತು. ಅದಕ್ಕಾಗಿ ಆ ದಂಪತಿ ದತ್ತು ಪ್ರಕ್ರಿಯೆ ನಡೆಸಲು ಮುಂದಾದರೂ ಗಂಡು ಮಗು ಪಡೆಯಲಾಗದೆ ನಿರಾಶರಾಗಿದ್ದರು. ದತ್ತು ಪ್ರಕ್ರಿಯೆಯಲ್ಲಿ ಹೆಣ್ಣು ಶಿಶುವನ್ನೇ ನೀಡೋದರಿಂದ ಆ ದಂಪತಿ ನಿರಾಶರಾಗಿ ಇಂತಹ ವಾಮ ಮಾರ್ಗಕ್ಕೆ ಇಳಿದಿದ್ದರು. ತಮ್ಮ ಪರಿಚಿತರಿಂದ ಈ ಮೂವರು ಮಕ್ಕಳ ಕಳ್ಳಿಯರ ಸಂಪರ್ಕಕ್ಕೆ ಬಂದ ದಂಪತಿ ಗಂಡು ಮಗುವಿನ ಬೇಡಿಕೆ ಇಟ್ಟು 50 ಸಾವಿರಕ್ಕೆ ಡೀಲ್‌ ಕುದುರಿಸಿದ್ದರು. ಈ ಮೂವರಿಗೆ ಮುಂಗಡವಾಗಿ 25 ಸಾ. ರು ಹಣವನ್ನೂ ನೀಡಿದ್ದರು ಎಂಬುದನ್ನು ಬಂಧಿತ ಮೂವರು ಮನೆಗೆಲಸದವರು ಬಾಯಿ ಬಿಟ್ಟಿದ್ದಾರೆಂದು ಆಯುಕ್ತ ಡಾ. ಶರಣಪ್ಪ ಹೇಳಿದ್ದಾರೆ.

ಹುಟ್ಟಿದ 8 ಗಂಟೆಯಲ್ಲೇ ಅಪಹರಣ- 24 ಗಂಟೆಯಲ್ಲಿ ಮಗು ಪತ್ತೆ:

ಸೋಮವಾರ ಮಧ್ಯಾಹ್ನ ಮಗುವಿನ ಅಪಹರಣ ಮಾಡಲಾಗಿತ್ತು. ಈ ಕುರಿತಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಗು ಪತ್ತೆಗೆ 3 ವಿಶೇಷ ತನಿಖೆ ತಂಡಗಳ ರಚನೆಯಾಗಿತ್ತು.

ಮಾಸಿಕ ಅಪರಾಧ ಸಭೆಯಲ್ಲಿರೋವಾಗಲೇ ಮಗು ಅಪಹರಣದ ಸುದ್ದಿ ಬಂತು. ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ತನಿಖೆಗೆ ಮುಂದಾದೇವು. ಈ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷ್ಯಗಳು ಅಷ್ಟಾಗಿ ಇಲ್ಲದೆ ಹೋದರು, ಸ್ಥಳೀಯ ಆಟೋವಾಲಾಗಳು, ಸಾರ್ವಜನಿಕರು, ಆಸ್ಪತ್ರೆ ಸಿಸಿಟಿವಿ ದೃಶ್ಯಾವಳಿ ಇತ್ಯಾದಿ ಸುಳಿವಿನ ಬೆನ್ನು ಹತ್ತಿದೆವು. ನಗರಾದ್ಯಂತ 80 ರಿಂದ 100ರಷ್ಟು ಪೊಲೀಸ್‌ ಸಿಬ್ಬಂದಿ ಪಹರೆ ಹಾಕಿ ಕಾವಲಿಡಲಾಗಿತ್ತು.

ರೈಲು, ಬಸ್‌ ನಿಲ್ದಾಣ ಇಲ್ಲೆಲ್ಲಾ ನಿಗಾ ಇಟ್ಟಿದ್ದೇವು. ನಮ್ಮ ಕಲಬುರಗಿ ಠಾಣೆಗಳ ಎಲ್ಲಾ ಪೊಲೀಸರು ನಗರಾದ್ಯಂತ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗಳಲ್ಲೇ ಮಗುವನ್ನು ಪತ್ತೆ ಮಾಡಿದ್ದಾರೆಂದು ಡಾ. ಶರಣಪ್ಪ ಪೊಲೀಸ್‌ ತಂಡವನ್ನ ಅಭಿನಂದಿಸಿದರು.

ತಾಯಿಗೆ ಮಗು ಒಪ್ಪಿಸಿದ ಪೊಲೀಸ್‌:

ಬುಧವಾರ ನಸುಕಿನ ಜಾವ ಎಂಎಸ್‌ಕೆ ಮಿಲ್‌ ಬಡಾವಣೆಯಲ್ಲಿ ಆರೋಪಿಗಳ ಮನೆಯಲ್ಲೇ ಮಗು ಪತ್ತೆಯಾಗಿದೆ. ಖುದ್ದು ಪ್ರಕರಣದ ಉಸ್ತುವಾರಿ ವಹಿಸಿದ್ದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗ ಬುಧವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಬಾಯಿ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಯಾವುದೇ ಅಪರಾಧ ಕೃತ್ಯ ನಡೆದಲ್ಲಿ ಜನ ದೂರು ಕೊಡಲು ವಿಳಂಬ ಮಾಡಬಾರದು. ತಕ್ಷಣ ಪೊಲೀಸ್‌ ಸಹಾಯವಾಣಿ 112 ಗೆ ಕರೆ ಮಾಡಲಿ, ದೂರು ಬೇಗ ಕೊಟ್ಟಲ್ಲಿ ಅಪರಾಧ ಕೃತ್ಯದಲ್ಲಿ ಆರೋಪಿಗಳನ್ನು ಹಿಡಿಯುವ, ಅಪರಾಧ ತಪ್ಪಿಸುವ ವಿಚಾರದಲ್ಲಿ ಪೊಲೀಸರು ಇನ್ನೂ ಹೆಚ್ಚಿಗೆ ಜನಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

ಡಾ. ಶರಣಪ್ಪ ಢಗೆ, ನಗರ ಪೊಲೀಸ್‌ ಕಮೀಶ್ನರ್‌, ಕಲಬುರಗಿ

ಕಳೆದು ಹೋದ ಮಗು 24 ಗಂಟೆಯೊಳಗೆ ನಸುನಗುತ್ತ ಕಣ್ಣು ಪಿಳುಕಿಸುತ್ತ ಮತ್ತೆ ತನ್ನ ತಾಯಿ ಮಡಿಲಲ್ಲಿ ಬೆಚ್ಚಗೆ ಮಲಗಿರೋದು ಕಂಡಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಅದನ್ನು ಯಾವುದೇ ಶಬ್ಧಗಳಲ್ಲಿ ಹೇಳಲಾಗದು. ಮಗು ಸಿಗೋದೇ ಇಲ್ಲವೆಂಬ ಆತಂಕ ಕಾಡಿತ್ತು. ಆದರೆ ಪೊಲೀಸರ ಸಮಯಕ್ಕೆ ಸರಿಯಾಗಿ ನಡೆಸಿದ ಕಾರ್ಯಾಚರಣೆಯಿಂದಾಗಿ ನಮ್ಮ ಕಂದಮ್ಮ ಮತ್ತೆ ನಮ್ಮ ಕೈ ಸೇರಿತು.

ರಾಮು ಸಗರ, ವರ್ಕಶಾಪ್‌ ಮಾಲೀಕ, ಮಗುವಿನ ತಂದೆ, ರಾವೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!