ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ಕುಟುಂಬ ಬಚಾವ್‌

KannadaprabhaNewsNetwork | Published : Jul 31, 2024 1:00 AM

ಸಾರಾಂಶ

ಕೇರಳದ ಭೂ ಕುಸಿತದಲ್ಲಿ ಕ್ಷಣಮಾತ್ರದಲ್ಲಿ ಚಾಮರಾಜನಗರದಲ್ಲಿ ಕುಟುಂಬ ಬಚಾವ್ ಆದ ಘಟನೆ ವೈನಾಡಿನ ಚೂರಲ್ ಮಲೆಯಲ್ಲಿ ನಡೆದಿದೆ‌.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೇರಳದ ಭೂ ಕುಸಿತದಲ್ಲಿ ಕ್ಷಣಮಾತ್ರದಲ್ಲಿ ಚಾಮರಾಜನಗರದಲ್ಲಿ ಕುಟುಂಬ ಬಚಾವ್ ಆದ ಘಟನೆ ವೈನಾಡಿನ ಚೂರಲ್ ಮಲೆಯಲ್ಲಿ ನಡೆದಿದೆ‌.

ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾಗಿದ್ದು, ಮೆಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೆಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್ ಮಲೆಯಲ್ಲಿದ್ದರು‌. ಚೂರಲ್ ಮಲೆಗೂ ಮೆಪಾಡಿಗೂ 6 ಕಿಮೀ ದೂರದಲ್ಲಿದ್ದು, ಭೂ ಕುಸಿತ ಉಂಟಾಗುವ ಕೆಲವೇ ಸಮಯಕ್ಕೂ ಮುನ್ನ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.

ಕುಟುಂಬ ಕಾಪಾಡಿದ ಹಸು: ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡು ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ.

ಬಳಿಕ ನೋಡ ನೋಡುತ್ತಿದ್ದಂತೆ ತಾವಿದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೆಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದರಿಂದ ಪ್ರವಿದಾ, ಶ್ರೀಲಜ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ. ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತ್ತರನ್ನು ರಕ್ಷಣಾಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಾಕಿದ್ದ ಹಸು ದೇವರಂತೆ ಕುಟುಂಬಕ್ಕೆ ಅಪಾಯದ ಬಗ್ಗೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರು ಮಾಡಿದೆ.

Share this article