ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶತಮಾನದ ಇತಿಹಾಸವಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ನೆರವಾಗಿದೆ. ಆದರೆ ಕೆಲ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದಾಗಿ ಪರೀಕ್ಷೆಗೆ ಹಾಜರಾಗದೆ ಪದವಿ ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ. ಪದವಿ ಪಡೆಯಬೇಕೆಂಬ ಅವರ ಕನಸು ನನಸಾಗದೆ ಉಳಿದಿದೆ. ಇಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರೆಲ್ಲರಿಗೂ ಪರೀಕ್ಷೆ ಬರೆಯಲು ಒಂದು ಅವಕಾಶ ನೀಡಲು ಮೈಸೂರು ವಿವಿ ನಿರ್ಧರಿಸಿದೆ.2004-05ನೇ ಸಾಲಿನಿಂದ 2018-19ನೇ ಅವಧಿಯ ಪಠ್ಯಕ್ರಮದಲ್ಲಿ ಮೂರು ವರ್ಷದ ಪದವಿ ಅವಧಿ ಮುಗಿಸಿದ್ದರೂ ನಾನಾ ಕಾರಣದಿಂದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ/ ಬಿಬಿಎಂ, ಬಿಎಸ್.ಡಬ್ಯೂ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿ ಅನುತ್ತೀರ್ಣರಾಗಿರುವ ಮೈಸೂರು ವಿವಿ ಘಟಕ ಕಾಲೇಜುಗಳು ಹಾಗೂ ಸಂಯೋಜನೆ ಪಡೆದ ಸರ್ಕಾರಿ, ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಪದವಿಯ ಆರು ಸೆಮಿಸ್ಟರ್ ಗಳ ಪೈಕಿ ಯಾವುದೇ ಸೆಮಿಸ್ಟರ್ ನ ಯಾವುದೇ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ, ಆಯಾ ವಿಷಯಗಳ ಪರೀಕ್ಷೆಗಳನ್ನು ತೆಗೆದುಕೊಳ್ಳಬದು.
ಈ ಬಗ್ಗೆ ವಿವಿಯು ಶೀರ್ಘದಲ್ಲೇ ಸುತ್ತೋಲೆ ಹೊರಡಿಸಲಿದ್ದು, ಪರೀಕ್ಷೆ ಬರೆಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಹಿಂದೆ ತಾವು ವ್ಯಾಸಂಗ ಮಾಡಿರುವ ಕಾಲೇಜಿನಲ್ಲಿ ಪರೀಕ್ಷಾ ಶುಲ್ಕ ಪಾವತಿಸಬೇಕು. ಮೈಸೂರು ನಗರವನ್ನು ಕೇಂದ್ರವಾಗಿಸಿಕೊಂಡು ನಾಲ್ಕು ಜಿಲ್ಲೆಗಳಾದ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರದ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.ಈ ಅವಕಾಶದಿಂದ ವಂಚಿತರಾಗದಂತೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಈಗಾಗಲೇ ನಾಲ್ಕು ಜಿಲ್ಲೆಯ (ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ) ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಪ್ರಾಂಶುಪಾಲರ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸದೆ ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು (ಹೆಸರು, ರಿ.ನಂ, ವಿಷಯ, ತರಗತಿ, ಪದವಿ ಪೂರ್ಣಗೊಳಿಸಿದ ಅವಧಿ ಇತ್ಯಾದಿ) ಸಂಗ್ರಹಿಸಿ ಮೈಸೂರು ವಿವಿಗೆ ನೀಡಲು ಸೂಚಿಸಲಾಗಿದೆ.
-- ಬಾಕ್ಸ್---- ವಿದ್ಯಾರ್ಥಿಗಳಿಗೆ ಅನುಕೂಲ--
ಜಿಲ್ಲೆಗೊಂದು ವಿವಿ ಆಗಿರುವುದರಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಗೊಂದಲ ಬಹುತೇಕ ವಿದ್ಯಾರ್ಥಿಗಳಲ್ಲಿದೆ. ಕೆಲವರು ಪದವಿ ಪೂರ್ಣಗೊಳ್ಳದ ಕಾರಣ ಕಾಲೇಜುಗಳ ಸಂಪರ್ಕದಿಂದ ದೂರ ಉಳಿದಿರುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪದವಿ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಹೆಚ್ಚಿನ ಆಸಕ್ತಿವಹಿಸಿ ಎಲ್ಲರಿಗೂ ತಿಳಿಯುವಂತೆ ಮಾಹಿತಿ ನೀಡಬೇಕಿದೆ. ಈ ಪರೀಕ್ಷೆಯನ್ನು ಮಾನಸಗಂಗೋತ್ರಿಯ ಮೌಲ್ಯಭವನದಲ್ಲಿ ಸರಿ ಸುಮಾರು ಜೂನ್, ಜುಲೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.ಒಂದು ಬಾರಿಯ ಕ್ರಮವಾಗಿ, ವಿಶೇಷವಾಗಿ ಕೈಗೊಂಡಿರುವ ಈ ಪರೀಕ್ಷಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸುವ ಹಾಗೂ ವಿದ್ಯಾರ್ಥಿಗಳು ಇದರಿಂದಾಗುವ ಉತ್ತಮ ಅವಕಾಶವನ್ನು ಪಡೆದುಕೊಳ್ಳುವ ಸಂಬಂಧ, ಮೈಸೂರು ವಿವಿ ಪರೀಕ್ಷಾ ವಿಭಾಗವು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಎಚ್. ಮಹದೇವಸ್ವಾಮಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಹೆಚ್ಚಿನ ಮಾಹಿತಿಗೆ ಮೊ. 90352 35245 ಹಾಗೂ ದೂ. 0821-2419273 ಸಂಪರ್ಕಿಸಬಹುದು ಎಂದು ಮೈಸೂರು ವಿವಿ ಕುಲಸಚಿವರು ತಿಳಿಸಿದ್ದಾರೆ.