ಉಡುಪಿ: ಸಿದ್ದರಾಮಯ್ಯ ಅವರನ್ನು ಏಕಾಏಕಿ ಅಧಿಕಾರದಿಂದ ಇಳಿಸಿರುವುದು ಹಿಂದುಳಿದ ವರ್ಗದ ಜನರಿಗೆ ನೋವುಂಟು ಮಾಡಿದೆ, ಅವರಿಗೊಸ್ಕರ ಕಾಂಗ್ರೆಸನ್ನು ಬೆಂಬಲಿಸಿದ ವರ್ಗಕ್ಕೆ ಬೇಸರವಾಗಿದೆ. ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ಸನ್ನು ಹಿಂದುಳಿದ ವರ್ಗ ಒಪ್ಪುವುದಿಲ್ಲ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ, ಸಿದ್ದರಾಮಯ್ಯಗೂ ನಮಗೂ ಅಭಿಪ್ರಾಯ ಬೇಧ ಹಲವಿದೆ. ನಮಗೂ ಸಿದ್ದರಾಮಯ್ಯ ಅವರ ವಿಚಾರಗಳು ರಾಜಕಾರಣದ ದಿಕ್ಕುಗಳು ಬೇರೆ ಇರಬಹುದು, ಅವರು ಅನೇಕ ಸರಿ ತಪ್ಪುಗಳನ್ನೂ ಮಾಡಿರಬಹುದು, ಆದರೇ ಅವರು ಹಿಂದುಳಿದ ವರ್ಗದ ಜನರು, ದಲಿತರ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ನಾಯಕ, ಅವರಂತಹ ಅನುಭವಿ ರಾಜಕಾರಣಿಯನ್ನುಈ ರೀತಿ ಅಧಿಕಾರದಿಂದ ಇಳಿಸಿದ್ದು ದುರದೃಷ್ಟಕರ, ಇದು ಅವವರಿಗೆ ರಾಜಕೀಯ ಜೀವನದ ಕೊನೆ ಹಂತದಲ್ಲಿ ಮಾಡಿರುವ ನೋವು ಎಂದು ಕೋಟ ವಿಷಾದಿಸಿದರು. ಒಂದು ಸರ್ಕಾರ ರಾಜ್ಯದ ಎಲ್ಲರನ್ನೂ ನೋಡಬೇಕು, ಅಭಿವೃದ್ಧಿ ಕಡೆಗೂ ಗಮನ ಕೊಡಬೇಕು, ಸಮಾಜದ ಕಟ್ಟ ಕಡೆಯ ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಆದರೇ ರಾಜ್ಯದಲ್ಲಿ ಬರಲಿರುವ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಇದೆ ಅನಿಸುತ್ತಿಲ್ಲ ಎಂದವರು ನಿರಾಸೆ ವ್ಯಕ್ತಪಡಿಸಿದರು.