ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ವಿಜಯಕುಮಾರ

KannadaprabhaNewsNetwork | Published : Apr 7, 2025 12:37 AM

ಸಾರಾಂಶ

ಮಾದಕ ವಸ್ತುಗಳ ಬಳಕೆಯಿಂದ ಅದನ್ನು ಸೇವನೆ ಮಾಡುವ ವ್ಯಕ್ತಿಯ ಕುಟುಂಬದ ಮೇಲೆ ಮಾತ್ರವಲ್ಲದೇ ಇಡೀ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗುತ್ತದೆ

ಕಾರವಾರ: ಮಾದಕ ವಸ್ತುಗಳ ಬಳಕೆಯಿಂದ ಅದನ್ನು ಸೇವನೆ ಮಾಡುವ ವ್ಯಕ್ತಿಯ ಕುಟುಂಬದ ಮೇಲೆ ಮಾತ್ರವಲ್ಲದೇ ಇಡೀ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ

ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ಅಭಿಪ್ರಾಯಿಸಿದರು.

ನಗರದ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ಜಿಲ್ಲೆಯ ಸರ್ಕಾರಿ ಅಭಿಯೋಜಕರಿಗೆ, ಪೊಲೀಸ್, ನ್ಯಾಯಾಂಗ ಅಧಿಕಾರಿಗಳಿಗೆ, ತನಿಖಾ ಸಹಾಯಕರಿಗೆ ಮತ್ತು ವಿವಿಧ ಇಲಾಖಾ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾದಕ ದ್ರವ್ಯಗಳ ಮತ್ತು ಮನೋವಿಕೃತ ವಸ್ತುಗಳ ಅಧಿನಿಯಮ-1985ರ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಮನೆಯಲ್ಲಿ ಕಳ್ಳತನ, ಕುಟುಂಬದಲ್ಲಿ ಕೊಲೆಗಳು, ಅಪಘಾತ ಪ್ರಕರಣಗಳು, ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗುತ್ತಿವೆ. ಇದು ಇಡೀ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಮಾದಕ ವಸ್ತುಗಳ ಮಾರಾಟದಿಂದ ದೊರೆಯುವ ಹಣ ಕೂಡ ದುಷ್ಕೃತ್ಯಗಳಿಗೆ ಪ್ರೇರಣೆ ನೀಡಲಿದೆ. ಇಂತಹ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿನ ಮಾದಕ ದ್ರವ್ಯಗಳ ಮತ್ತು ಮನೋವಿಕೃತ ವಸ್ತುಗಳ ಗಂಭೀರ ಪ್ರಕರಣಗಳ ಕುರಿತಂತೆ ಜಿಲ್ಲಾ ನ್ಯಾಯಾಲಯದಲ್ಲಿ ಜನವರಿ 2022ರಿಂದ ಮಾರ್ಚ್ 2025ರವರೆಗೆ 21 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 5 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿದೆ. 36 ಪ್ರಕರಣಗಳು ಬಾಕಿ ಇವೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಪ್ರಕರಣಗಳಲ್ಲಿ ಪೊಲೀಸರು ಪ್ರಾಪರ್ಟಿ ರಿಜಿಸ್ಟರ್ ನ್ನು ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಎಫ್.ಎಸ್.ಎಲ್ ವರದಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಮಾದಕ ವಸ್ತಗಳು ಮಾದರಿಗಳ ಸಂಗ್ರಹಣೆ ಮತ್ತು ಕಾಯಿದೆಯಲ್ಲಿ ತಿಳಿಸಿರುವ ಕಡ್ಡಾಯ ತನಿಖೆಗಳನ್ನು ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಜಿಲ್ಲಾ ಮಟ್ಟದ ಎನ್‌ಕೋರ್ಡ್ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ನಿರಂತರವಾಗಿ ಸಭೆಗಳನ್ನು ನಡೆಸಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತಂತೆ ಮಾಹಿತಿಗಳ ಸಂಗ್ರಹಣೆ ಮತ್ತು ಸಮನ್ವಯದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಎಸ್ಪಿ ಎಂ.ನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತಂತೆ 345 ಪ್ರಕರಣಗಳನ್ನು ದಾಖಲಿಸಿ 571 ಆರೋಪಿತರನ್ನು ಬಂಧಿಸಲಾಗಿದೆ. ₹62.36 ಲಕ್ಷ ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 149 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಮಾದಕ ವಸ್ತುಗಳ ನಿರ್ಮೂಲನೆಯ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ರೋಡಿಗ್ರಸ್, ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ., ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಪಡಿಯಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ವಿಭಾಗಾಧಿಕಾರಿ ಕನಿಷ್ಕ, ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಡಾ. ಪೂರ್ಣಿಮಾ, ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್, ಪ್ರಧಾನ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಇದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಮಾತನಾಡಿದರು.

Share this article