ನನ್ನ ಪ.ಘಟ್ಟ ವರದಿ ಬಗ್ಗೆ ತಪ್ಪು ಅಭಿಪ್ರಾಯ ಬಿತ್ತಿದ್ದಾರೆ: ಗಾಡ್ಗೀಳ್‌

KannadaprabhaNewsNetwork | Published : Aug 11, 2024 1:35 AM

ಸಾರಾಂಶ

ಅಧ್ಯಯನ ನಡೆಸದೆ ನನ್ನ ವರದಿಯ ಶಿಫಾರಸುಗಳ ಬಗ್ಗೆ ತಪ್ಪು ‍‍ವ್ಯಾಖ್ಯಾನ ಮಾಡಿ, ವರದಿಯನ್ನು ಅನುಷ್ಠಾನಗೊಳಿಸಲಾಗದು ಎಂಬ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ ಎಂದು ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ ನಡೆಸಿರುವ ಖ್ಯಾತ ಪರಿಸರ ತಜ್ಞ ಪ್ರೊ. ಮಾಧವ್ ಗಾಡ್ಗೀಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧ್ಯಯನ ನಡೆಸದೆ ನನ್ನ ವರದಿಯ ಶಿಫಾರಸುಗಳ ಬಗ್ಗೆ ತಪ್ಪು ‍‍ವ್ಯಾಖ್ಯಾನ ಮಾಡಿ, ವರದಿಯನ್ನು ಅನುಷ್ಠಾನಗೊಳಿಸಲಾಗದು ಎಂಬ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ ಎಂದು ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ ನಡೆಸಿರುವ ಖ್ಯಾತ ಪರಿಸರ ತಜ್ಞ ಪ್ರೊ. ಮಾಧವ್ ಗಾಡ್ಗೀಳ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಶ್ಚಿಮಘಟ್ಟಗಳಲ್ಲಿ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌ಗಳನ್ನು ಅತಿಯಾಗಿ ನಿರ್ಮಿಸುವುದನ್ನು ತಡೆಯುವುದು ಅನಿವಾರ್ಯ ಎಂದು ಸಲಹೆ ಮಾಡಿದ್ದಾರೆ.

ಶನಿವಾರ ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ಮಾತನಾಡಿದ ಅವರು, ಸಂಪೂರ್ಣ ವರದಿಯನ್ನು ಅಧ್ಯಯನ ಮಾಡಿದರೆ ಅದರಲ್ಲಿ ಮಾಡಿರುವ ಶಿಫಾರಸುಗಳು, ಅಂಶಗಳು ಮತ್ತು ಅವುಗಳ ಮಹತ್ವ ಅರ್ಥವಾಗುತ್ತದೆ. ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿರುವ ಅರಣ್ಯನಾಶ, ವಾಣಿಜ್ಯೀಕರಣ, ಅಭಿವೃದ್ಧಿ ಕಾಮಗಾರಿಗಳು, ಮಿತಿ ಮೀರಿದ ಟೀ ಪ್ಲಾಂಟೇಷನ್, ಮರಗಳ ಹನನದಿಂದ ಬೆಟ್ಟ, ಭೂ-ಕುಸಿತಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಪಶ್ಚಿಮಘಟ್ಟದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸದ ಹೊರತು ಇಂತಹ ಅನಾಹುತಗಳನ್ನು ತಪ್ಪಿಸಲು ಆಗುವುದಿಲ್ಲ. ಮುಂದೆಯೂ ಇಂತಹ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭಾರಿ ಅನಾಹುತದಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅತಿಸೂಕ್ಷ್ಮ ಎನಿಸಿರುವ ಪ್ರದೇಶಗಳಿಂದ ನಾವು ದೂರ ಇರಬೇಕು. ಪ್ರವಾಸೋದ್ಯಮ ಹೆಸರಿನಲ್ಲಿ ಅತಿಯಾಗಿ ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮುಂತಾದ ಚಟುವಟಿಕೆಗಳು, ರಸ್ತೆ ನಿರ್ಮಾಣ ಮತ್ತು ವಾಹನಗಳ ಸಂಚಾರವನ್ನು ತಡೆಗಟ್ಟುವುದು ಅನಿವಾರ್ಯ ಗಾಡ್ಗೀಳ್ ಅವರು ಹೇಳಿದರು.

ಐಐಎಸ್ಸಿ ವಿಜ್ಞಾನಿ ಟಿ.ವಿ. ರಾಮಚಂದ್ರ ಮಾತನಾಡಿ, ಪಶ್ಚಿಮಘಟ್ಟಗಳ ಅನೇಕ ಭಾಗದಲ್ಲಿ ಅಧ್ಯಯನ ಮಾಡಿದ್ದೇವೆ. ಆ ಬಗ್ಗೆ ಲೇಖನ ಬರೆದಿದ್ದೇವೆ. ಈ ಬಗ್ಗೆ ಚರ್ಚೆಯಾಗಬೇಕು ಎಂದಾಗ, ಇದೆಲ್ಲಾ ನಿಮ್ಮಂಥವರಿಗೆ ಮಾತ್ರ ಬೇಕು ಎಂದು ತಿರಸ್ಕಾರ ಮನೋಭಾವದಿಂದ ಮಾತನಾಡುತ್ತಾರೆ. ಆದರೆ, ಇಡೀ ದೇಶದ ಭೂಭಾಗದ ಪೈಕಿ ಶೇ.5ರಷ್ಟು ಮಾತ್ರ ಪಶ್ಚಿಮಘಟ್ಟ ಇದೆ. ನಮ್ಮ ದೇಶದ ಭವಿಷ್ಯಕ್ಕಾಗಿ ಅದನ್ನು ಸಂರಕ್ಷಿಸಬೇಕು. ಕಳೆದ 2 ದಶಕದಲ್ಲಿ ನಿತ್ಯ ಹರಿದ್ವರ್ಣ ಕಾಡು ಶೇ.8ರಷ್ಟು ಕಡಿಮೆಯಾಗಿದೆ. ಕಾಡುಗಳು ಛಿದ್ರವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಲೆನಾಡಿನ ಕಾಡುಗಳಲ್ಲಿ ವರ್ಷದಿಂದ ವರ್ಷಕ್ಕೆ ಅತಿಕ್ರಮಣವಾಗುತ್ತಲೇ ಇದೆ. ರಾಜಕೀಯ ಪುಡಾರಿಗಳ ಕೈವಾಡದಿಂದ ಅರಣ್ಯ ಒತ್ತುವರಿ ಆಗುತ್ತಿದ್ದು, ಅರಣ್ಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ. ಅರಣ್ಯಗಳು ಒತ್ತುವರಿಯಾಗಿರುವುದನ್ನು ಕಣ್ಣಾರೆ ನೋಡಿ ಅಧ್ಯಯನದಲ್ಲಿ ದಾಖಲಿಸಿದ್ದೇನೆ. ಪರಿಸರ ನಾಶದ ಅಪಾಯ ಮುಂದೆ ಹೆಚ್ಚಾಗಲಿದೆ ಎಂದು ರಾಮಚಂದ್ರನ್ ಹೇಳಿದರು.

ಇದೇ ವೇಳೆ, ಗಾಡ್ಗೀಳ್ ವರದಿಯ ತಪ್ಪು ಕಲ್ಪನೆ ಹೋಗಲಾಡಿಸಲು ಐವರು ಸದಸ್ಯರ ಸಮಿತಿ ನೇಮಿಸಬೇಕು. ಮಳೆ ನೀರು ಮತ್ತು ಬಿಸಿಲು ಕೊಯ್ಲು ಕಡ್ಡಾಯಗೊಳಿಸಬೇಕು, ವಾಣಿಜ್ಯ ಚಟುವಟಿಕೆಗೆ ನಿರ್ಬಂಧ, ವಲಸಿಗರ ನಿಯಂತ್ರಣಕ್ಕೆ ಇನ್ನರ್ ಲೈನ್ ಪರ್ಮಿಟ್ ಅನುಷ್ಠಾನ ಸೇರಿದಂತೆ ಹತ್ತು ಅಂಶಗಳ ನಿರ್ಣಯಗಳನ್ನು ಮಂಡಿಸಲಾಯಿತು. ಪರಿಸರ ಲೇಖಕ ನಾಗೇಶ್ ಹೆಗಡೆ ಸಂವಾದದಲ್ಲಿ ಇದ್ದರು.

Share this article