ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದುನಿಯಾಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಲನಚಿತ್ರ ನ. 24ರಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಉತ್ತರ ಕರ್ನಾಟಕ ಭಾಗದ ಚಿತ್ರಪ್ರೇಮಿಗಳು ಚಿತ್ರ ನೋಡಿ ಹಾರೈಸುವಂತೆ ಚಿತ್ರನಟ ಅಭಿಷೇಕ ಅಂಬರೀಶ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಯಣ್ಣ ಫಿಲಂಸ್‌ನಿಂದ ಈ ಚಿತ್ರವನ್ನು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಪಾಪ್ ಕಾರ್ನ್ ಮಂಕಿಟೈಗರ್ ಖ್ಯಾತಿಯ ನಿರ್ಮಾಪಕ ಕೆ.ಎಂ. ಸುಧೀರ್ ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್, ಟೈಟಲ್ ಟ್ರ್ಯಾಕ್ ಹಾಗೂ ಮಾಸ್ ಸಾಂಗ್ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಇರುವ ಈ ಚಿತ್ರಕ್ಕೆ ಶೇಖರ್ ಎಸ್. ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ನಾನು ಮೊದಲಬಾರಿಗೆ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಚಿತ್ರವನ್ನು ಬೆಂಗಳೂರು, ಮೈಸೂರು, ಚಾಮರಾಜನಗರ, ಕನಕಪುರ ಭಾಗಗಳಲ್ಲಿ ಒಟ್ಟು 120 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ರಚಿತಾರಾಮ್ ಮತ್ತು ಪ್ರಿಯಾಂಕಾ ಕುಮಾರ್ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ ಎಂದರು.
ಇದು ಪ್ಯಾನ್ ಕರ್ನಾಟಕ ಸಿನಿಮಾ:ಇಂದು ಎಲ್ಲ ಚಿತ್ರಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಚಿತ್ರನಟರು, ನಿರ್ದೇಶಕರು, ನಿರ್ಮಾಪಕರು ಉತ್ಸುಕರಾಗಿದ್ದಾರೆ. ಆದರೆ, ನಾವು ಈ ಬ್ಯಾಡ್ ಮಾನರ್ಸ್ ಚಿತ್ರವನ್ನು ಪ್ಯಾನ್ ಕರ್ನಾಟಕದ ಉದ್ದೇಶದೊಂದಿಗೆ ಕನ್ನಡ ಭಾಷೆಯಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ. ಜನರಿಗೆ ಹೊಸ ವಿಷಯ ಹೊಂದಿದ ಉತ್ತಮ ಚಿತ್ರ ನೀಡಬೇಕು ಎಂಬ ಉದ್ದೇಶವಿದೆ. ಹೊಸತನ್ನು ಜನತೆ ಯಾವಾಗಲೂ ಸ್ವೀಕರಿಸುತ್ತಾರೆ ಎಂಬುದು ನನ್ನ ನಂಬಿಕೆ. ಹಾಗಾಗಿ, ಬೇರೆ ಚಿತ್ರಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನವಾಗಿರುವ ಕಥೆಯನ್ನು ಹೇಳುತ್ತಿದ್ದೇವೆ. ಇದೊಂದು ಮನರಂಜನಾ ಚಲನಚಿತ್ರವಾಗಿದ್ದು, ಎಲ್ಲ ವರ್ಗದವರಿಗೂ ಮೆಚ್ಚುಗೆಯಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದರು.
ಈ ವೇಳೆ ಶಿವಾನಂದ ಮುತ್ತಣ್ಣವರ, ಬಾಲರಾಜ, ಈರಣ್ಣ ಹಿರೇಹಾಳ, ಸಿದ್ದರಾಮ ಪಗಲಾಪುರ ಸೇರಿದಂತೆ ಹಲವರಿದ್ದರು.ನಾನು ರಾಜಕಾರಣಕ್ಕೆ ಹೋಗುವುದಿಲ್ಲ: ಅಭಿಷೇಕ ಅಂಬರೀಶ
ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಹೋಗುವ ಇಚ್ಛೆ ಹೊಂದಿಲ್ಲ. ನಾನು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಇಚ್ಛೆ ಹೊಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ. ನನ್ನ ತಾಯಿ ಇರುವ ವರೆಗೂ ನಾನು ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಈ ರಂಗದಲ್ಲಿಯೇ ತಂದೆಯವರ ಸಾಧನೆ ಅಪಾರವಾಗಿದೆ. ಅದರಲ್ಲಿಯೇ ಮುಂದುವರಿಯುವೆ ಎಂದರು.ಸಿನಿಮಾನೇ ಬೇರೆ, ರಾಜಕಾರಣನೇ ಬೇರೆ. ಸಿನಿಮಾ ಜನರಿಗೆ ಮನರಂಜನೆ ನೀಡುವ ಕ್ಷೇತ್ರವಾದರೆ, ರಾಜಕಾರಣ ಜನಸೇವೆ ಮಾಡುವ ಕ್ಷೇತ್ರ. ಒಬ್ಬನೇ ಎರಡನ್ನೂ ನಿಭಾಯಿಸಿಕೊಂಡು ಹೋಗಲು ಆಗುವುದಿಲ್ಲ. ನನ್ನ ತಂದೆಯವರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ ಮೇಲೆ ರಾಜಕಾರಣಕ್ಕೆ ಬಂದವರು. ರಾಜಕಾರಣಕ್ಕೆ ಬಂದ ಮೇಲೆ ಕೆಲವೇ ಕೆಲವು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗಾಗಿ ಚಿತ್ರರಂಗ-ರಾಜಕಾರಣ ಎರಡೂ ಮುಂದುವರಿಸಿಕೊಂಡು ಹೋಗುವುದು ಕಷ್ಟ. ನನಗೆ ಚಿತ್ರರಂಗದಲ್ಲಿಯೇ ಮುಂದುವರಿಯುವ ಆಸೆಯಿದೆ. ಇಲ್ಲಿಯೇ ಇದ್ದು ಜನರಿಗೆ ಮನರಂಜನೆ ನೀಡುವ ಕಾರ್ಯ ಮಾಡುವೆ. ರಾಜಕಾರಣಕ್ಕೆ ಹೋಗುವ ಆಲೋಚನೆ, ಇಚ್ಛೆ ನನಗಿಲ್ಲ ಎಂದರು.