ಚಿತ್ರನಟರು, ಸೆಲೆಬ್ರಿಟಿಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ: ಟಿ.ಕೆ.ಲೋಕೇಶ್ ಬೇಸರ

KannadaprabhaNewsNetwork |  
Published : Jun 12, 2024, 12:31 AM IST
11ಕೆಎಂಎನ್‌ಡಿ-4ಮಂಡ್ಯ ಪಿಇಎಸ್ ಕಾನೂನು ಕಾಲೇಜು ಆವರಣದಲ್ಲಿ ನಡೆದ ವಿಶ್ವ ಆಹಾರ ಸುರಕ್ಷತಾ ದಿನ, ವಿಶ್ವ ತಂಬಾಕು ರಹಿತ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಅಧೀಕ್ಷಕ ಟಿ.ಕೆ.ಲೋಕೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಒಮ್ಮೆ ಉಪಯೋಗಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೊಮ್ಮೆ ಉಪಯೋಗಿಸದಂತೆ ಎಚ್ಚರ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು 2022ರಲ್ಲೇ ಕರೆ ನೀಡಿದ್ದರು. ಇಂತಹ ಮಹನೀಯರು ಹೇಳಿಕೆ ನೀಡಿದರೆ ಸಮಾಜದಲ್ಲಿ ಒಂದಷ್ಟು ಪರಿಣಾಮ ಬೀರುತ್ತದೆ. ಜನಸಾಮಾನ್ಯರು ಸಹ ಅದನ್ನು ಪಾಲಿಸಲು ಮುಂದಾಗುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜಕ್ಕೆ ಮಾದರಿಯಾಗಬೇಕಾದ ಚಿತ್ರನಟರು, ಸೆಲೆಬ್ರೆಟಿಗಳೇ ತಂಬಾಕು ಉತ್ಪನ್ನಗಳನ್ನು ಬಳಸುವ ಮೂಲಕ ಕೆಟ್ಟ ಸಂದೇಶ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಅಧೀಕ್ಷಕ ಟಿ.ಕೆ.ಲೋಕೇಶ್ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್ ಕಾನೂನು ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಗರದ ಪಿಇಎಸ್ ಕಾನೂನು ಕಾಲೇಜು ಆವರಣದಲ್ಲಿ ನಡೆದ ವಿಶ್ವ ಆಹಾರ ಸುರಕ್ಷತಾ ದಿನ, ವಿಶ್ವ ತಂಬಾಕು ರಹಿತ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಚಿತ್ರನಟರು, ಸೆಲೆಬ್ರೇಟಿಗಳು, ಹೆಸರಾಂತ ಚಿಂತಕರು ತಂಬಾಕು ಬಳಸಿದಲ್ಲಿ ಯುವ ಸಮೂಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇವರನ್ನು ನೋಡಿ ಹದಿಹರಯದವರು ಅನುಕರಣೆ ಮಾಡಲು ಹೋಗುತ್ತಾರೆ. ಇದರಿಂದ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಿಸಿದರು.ಸಮಾಜದಲ್ಲಿ ಕೆಲವೊಂದು ವೃತ್ತಿಯವರಿಗೆ ಮಾತ್ರ ಸಮವಸ್ತ್ರ ಧರಿಸಲು ಅವಕಾಶ ಇದೆ. ವೈಧ್ಯರು, ವಕೀಲರು, ಪೊಲೀಸರು ಇತರೆ ಕೆಲವು ವೃತ್ತಿಯಲ್ಲಿರುವವರು ಸೇವಾ ಮನೋಭಾವದಿಂದ ಸಮವಸ್ತ್ರ ಧರಿಸುತ್ತಾರೆ. ಸಮವಸ್ತ್ರ ಧರಿಸಿ ಕೆಟ್ಟ ಚಟಗಳನ್ನು ಅನುಸರಿಸುತ್ತಿದ್ದರೆ ಸಮಾಜದಲ್ಲಿರುವ ಹಲವಾರು ಮಂದಿ ಅವರನ್ನು ಅನುಕರಣೆ ಮಾಡುತ್ತಾರೆ ಎಂಬ ಅರಿವಿಲ್ಲದೆ ಅನಿಷ್ಠ ಪದ್ಧತಿಗೆ ದಾಸರಾಗಿರುತ್ತಾರೆ. ಇದು ನಿಲ್ಲಬೇಕು ಎಂದು ಸಲಹೆ ನೀಡಿದರು.ವೈದ್ಯರು, ವಕೀಲರು, ಪೊಲೀಸರು ದಿನದ 24 ಗಂಟೆಗಳ ಕಾಲವೂ ರೋಗಿಗಳು, ಕಕ್ಷಿದಾರರಿಗೆ ಸೇವೆ ನೀಡಬೇಕಾಗಿರುತ್ತದೆ. ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿರವಾಗಿದ್ದಾಗ ಮಾತ್ರ ಎಲ್ಲ ಸೇವೆಯನ್ನು ನೀಡಲು ಸಾಧ್ಯವಿದೆ. ಆದರೆ ಆರೋಗ್ಯ ಕೆಟ್ಟಿದ್ದರೆ ಸೇವೆ ನೀಡಲು ಅಸಾಧ್ಯವಾಗುತ್ತದೆ ಎಂದು ಹೇಳಿದರು.ಕಾನೂನು ಪದವಿ ಓದಿದವರೆಲ್ಲರೂ ವಕೀಲಿ ವೃತ್ತಿ ಮಾಡುವುದಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ವೃತ್ತಿಯನ್ನು ನಿಲ್ಲಿಸುತ್ತಾರೆ. ಕಡಿಮೆ ಒತ್ತಡ ಇರುವಂತಹ ಕೆಲಗಳಿಗೆ ಮುಂದಾಗುತ್ತಾರೆ. ಒತ್ತಡ ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಹಸಿರು ತರಕಾರಿ, ಸೊಪ್ಪು ಉಪಯೋಗಿಸಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಇದೆ. ತಂಬಾಕು ಸೇವನೆಯಿಂದ ಹಲವು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಾರಾಗೃಹದಲ್ಲಿರುವ ಕೈದಿಗಳ ಮುಂದೆ ಅಧಿಕಾರಿಗಳು ಕೆಟ್ಟ ಅಭ್ಯಾಸಗಳನ್ನು ತೊಡಗಿಸಿಕೊಂಡಲ್ಲಿ ಅವರಿಗೆ ಬುದ್ಧಿ ಹೇಳುವುದಾದರೂ ಹೇಗೆ, ನೀವೇ ಇಂತಹ ಕೆಟ್ಟ ಚಟಗಳನ್ನು ಮಾಡುತ್ತೀರಿ, ನಾವು ಅದರಿಂದ ಪಾರಾಗುವುದು ಹೇಗೆ ಎಂದು ಕೈದಿಗಳು ಪ್ರಶ್ನಿಸುವುದನ್ನೂ ನಾನು ನೋಡಿದ್ದೇನೆ ಎಂದು ಉದಾಹರಣೆ ಸಮೇತ ವಿವರಿಸಿದರು.ಡಯಟ್ ವಿಶ್ರಾಂತ ಉಪನ್ಯಾಸಕ ಜಯಶಂಕರ್ ಮಾತನಾಡಿ, ಒಮ್ಮೆ ಉಪಯೋಗಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೊಮ್ಮೆ ಉಪಯೋಗಿಸದಂತೆ ಎಚ್ಚರ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು 2022ರಲ್ಲೇ ಕರೆ ನೀಡಿದ್ದರು. ಇಂತಹ ಮಹನೀಯರು ಹೇಳಿಕೆ ನೀಡಿದರೆ ಸಮಾಜದಲ್ಲಿ ಒಂದಷ್ಟು ಪರಿಣಾಮ ಬೀರುತ್ತದೆ. ಜನಸಾಮಾನ್ಯರು ಸಹ ಅದನ್ನು ಪಾಲಿಸಲು ಮುಂದಾಗುತ್ತಾರೆ. ಆದರೆ, ಅಧಿಕಾರಿಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ವಿಫಲರಾದ ಕಾರಣ ಅದು ಯಶಸ್ಸು ಕಾಣಲಿಲ್ಲ ಎಂದು ವಿಷಾದಿಸಿದರು.ಸರ್ಕಾರಿ ಕಚೇರಿಗಳಲ್ಲಾದರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರ ಮೇರೆಗೆ ಜಿಲ್ಲಾಡಳಿತ ಸೇರಿ ಹಲವಾರು ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಕೊಂಚ ಕಡಿಮೆಯಾಗಿದೆ. ಇಂತಹ ಕಾರ್ಯವನ್ನು ಎಲ್ಲರೂ ಅನುಕರಣೆ ಮಾಡಿದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇದ ಮಾಡಬಹುದು ಎಂದು ಅಭಿಪ್ರಾಯಿಸಿದರು.ಪತ್ರಕರ್ತ ಡಿ.ಎನ್.ಶ್ರೀಪಾದು ಅಧ್ಯಕ್ಷತೆ ವಹಿಸಿದ್ದರು. ಪಿಇಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ. ಜೆ. ಯೋಗೀಶ್, ಪ್ರಾಧ್ಯಾಪಕರಾದ ಎಂ.ಎಸ್. ಯಮುನಾವತಿ, ಕೆ.ಎಸ್. ಜಯಕುಮಾರ್, ಎನ್.ಸಿ. ಸುಭಾಷ್, ಎಂ.ಪಿ. ಪ್ರಮೋದ್ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ