ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೆಗಡೆಯ ಆದಿತ್ಯ ಪ್ರಕಾಶನದಿಂದ ಪ್ರಕಟಿತ ಕವಿ ಟಿ.ಜಿ. ಭಟ್ಟ ಹಾಸಣಗಿ ವಿರಚಿತ ಕವನ ಸಂಕಲನ ಬಾಡದ ಕಡಲು ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಪುಸ್ತಕ ಲೋಕಾರ್ಪಣೆಗೊಳಿಸಿ, ಕಳೆದ ಐದು ದಶಕಗಳಿಂದ ಕವಿ ಟಿ.ಜಿ. ಭಟ್ ಹಾಸಣಗಿ ಸಾಹಿತ್ಯ ಕೃಷಿ ನಡೆಸುತ್ತಾ ಬಂದಿದ್ದಾರೆ. ೭೦ರ ಇಳಿವಯಸ್ಸಿನಲ್ಲೂ ಅವರ ಸಾಹಿತ್ಯೋತ್ಸಾಹ ಅಭಿನಂದನಾರ್ಹ ಎಂದರು. ಕೃತಿ ಪರಿಚಯಿಸಿದ ಹೊನ್ನಾವರ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ನಾಗರಾಜ ಹೆಗಡೆ, ಕೃತಿಯು ವೈವಿಧ್ಯಮಯವಾದ ಕವನಗಳನ್ನು ಹೊಂದಿದೆ. ಕಡಲು ಆಕರ್ಷಣೆಯ ಜತೆಗೆ ಮನುಷ್ಯನ ಅಹಂಕಾರ ನಿರಶನಕ್ಕೂ ಸಂದೇಶ ನೀಡುವಂಥದ್ದಾಗಿದೆ. ಸಾಹಿತ್ಯ ಕೇವಲ ಭಾಷಾ ಶಿಕ್ಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲ ಮಾನವರಿಗೆ ಸಂಬಂಧಿಸಿದ್ದು ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಪ್ರತಿಯೊಬ್ಬರಲ್ಲೂ ಕವಿತ್ವ ಇರುತ್ತದೆ. ಓದುಗರು ಹೆಚ್ಚಿದಂತೆ ಕವಿಗಳಿಗೂ ಪ್ರೋತ್ಸಾಹ, ಪ್ರೇರಣೆ ಸಿಗುತ್ತದೆ. ಸಾಹಿತ್ಯದ ಓದಿನಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ, ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಶಿಕ್ಷಕ ವಿದ್ಯಾರ್ಥಿಗಳಿಗೆ ಈ ಕೃತಿ ಲೋಕಾರ್ಪಣೆ ಮತ್ತು ಓದು ಕವನ ರಚಿಸಲು ಸ್ಫೂರ್ತಿ ನೀಡಲಿ ಎಂದರು. ಸಂಕಲನದೊಳಗಿನ ಕವನಗಳನ್ನು ಸಂದೀಪ ಮರಾಠೆ, ಉಷಾ ಗೌಡ ಮತ್ತು ಸಮೀಕ್ಷಾ ಜೋಶಿ ಹಾಡಿದರು. ಶ್ರೀಕಾಂತ ಭಟ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ರಾಧಾ ನಾಯ್ಕ ಕೃತಿಕಾರರನ್ನು ಪರಿಚಯಿಸಿದರು. ಜಯಶ್ರೀ ಡಿ. ವಂದಿಸಿದರು. ನಾಗಶ್ರೀ ಮತ್ತು ಸಂದೀಪ ಮರಾಠೆ ನಿರೂಪಿಸಿದರು.ನಿವೃತ್ತಿಯಾದ ಗಿರಿಜಾ ಎಲ್ ಭಟ್ಟರಿಗೆ ಸನ್ಮಾನ
ಶಿರಸಿ: ತಾಲೂಕಿನ ಭೈರುಂಬೆ ಗ್ರಾಪಂ ವ್ಯಾಪ್ತಿಯ ದೇವರಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಗಿರಿಜಾ ಎಲ್. ಭಟ್ಟ ಅವರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಊರ ನಾಗರಿಕರು ಸನ್ಮಾನಿಸಿ ಬೀಳ್ಕೊಡಲಾಯಿತು.ಸನ್ಮಾನ ಸ್ವೀಕರಿಸಿ, ಶಿಕ್ಷಕಿ ಗಿರಿಜಾ ಭಟ್ಟ ಮಾತನಾಡಿ, ಕಳೆದ ೯ ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ತವರೂರು ಭೈರುಂಬೆಯಾಗಿದ್ದು, ನನ್ನ ತವರೂರಿನಲ್ಲಿ ನಿವೃತ್ತಿಯಾಗುತ್ತಿರುವುದು ಸಂತೋಷದ ಸಂಗತಿ. ನಾನು ನಿವೃತ್ತಿ ಆದರೂ ನನ್ನ ತವರೂರಿನ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಶಾಲೆಗೆ ವರ್ಗಾವಣೆಗೊಂಡ ಬಳಿಕ ನನಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ತಂದೆ ಲಕ್ಷ್ಮಿನಾರಾಯಣ ಭಟ್ಟ ಹೆಸರಿನಲ್ಲಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಐದು ಸಾವಿರ ರುಪಾಯಿ ದತ್ತಿನಿಧಿ ನೀಡುತ್ತೇನೆ ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ ಹೆಗಡೆ ಮತ್ತು ಕಿರಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಪಟಗಾರ, ಉಪಾಧ್ಯಕ್ಷ ಪ್ರವೀಣ್ ಹೆಗಡೆ, ಎಸ್‌ಡಿಎಂಸಿ ಸದಸ್ಯರು, ಊರಿನ ಪ್ರಮುಖರಾದ ಶ್ರೀಪಾದ ಹೆಗಡೆ, ಶ್ರೀಕಾಂತ ಹೆಗಡೆ, ವಿನಯ್ ಭಟ್ಟ, ಎಂ.ಎಸ್. ಹೆಗಡೆ, ಗುರುಮೂರ್ತಿ ಹೆಗಡೆ, ಶಂಕರ ಮರಾಠಿ, ಗೌರಿ ಗೌಡ, ವಿವಿಧ ಶಾಲೆಯ ಶಿಕ್ಷಕರು ಇದ್ದರು. ಮುಖ್ಯ ಶಿಕ್ಷಕಿ ರಾಜಶ್ರೀ ಶಾಸ್ತ್ರೀ ಸ್ವಾಗತಿಸಿದರು, ಮಂಜುನಾಥ ಮರಾಠಿ ನಿರೂಪಿಸಿ, ವಂದಿಸಿದರು.