ಇಂಗ್ಲೆಂಡಿನಲ್ಲಿ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನ

KannadaprabhaNewsNetwork |  
Published : Jun 18, 2025, 11:48 PM IST
ಲಂಡನ್ ತಲುಪಿದ ಕಲಾವಿದರು  | Kannada Prabha

ಸಾರಾಂಶ

ಇಂಗ್ಲೆಂಡಿನಲ್ಲಿ ಬಹುಕಾಲದ ತರುವಾಯ ಬಡಗುತಿಟ್ಟಿನ ಯಕ್ಷಗಾನದ ಚಂಡೆ ಮದ್ದಳೆಗಳ ಸದ್ದು ಕೇಳಿ ಬರಲಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಇಂಗ್ಲೆಂಡಿನಲ್ಲಿ ಬಹುಕಾಲದ ತರುವಾಯ ಬಡಗುತಿಟ್ಟಿನ ಯಕ್ಷಗಾನದ ಚಂಡೆ ಮದ್ದಳೆಗಳ ಸದ್ದು ಕೇಳಿ ಬರಲಿದೆ. ಬ್ರಿಟಿಷರಿಗೆ ಯಕ್ಷಗಾನದ ರಸದೌತಣ ಉಣಿಸಲು ವೇದಿಕೆ ಸಜ್ಜಾಗಿದ್ದು, ಪ್ರಸಿದ್ಧ ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲ್ಕೋಡ ನೇತೃತ್ವದ ಅಭಿನೇತ್ರಿ ತಂಡ ಬ್ರಿಟನ್ ನ ವಿವಿಧೆಡೆ ಜೂ.20ರಿಂದ ಯಕ್ಷಗಾನ ಪ್ರದರ್ಶನ ನೀಡಲಿದೆ.

ಅನಿವಾಸಿ ಯಕ್ಷಗಾನ ಮಂಡಳಿ ಯುಕೆ ಅವರ ಸಂಯೋಜನೆಯಲ್ಲಿ ಆಯಾಮ ಯುಕೆ, ಸ್ಥಳೀಯ ಭಾರತೀಯ ಸಂಘಟನೆಗಳು ಹಾಗೂ ಅಭಿನೇತ್ರಿ ಆರ್ಟ್‌ ಟ್ರಸ್ಟ್ ನಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಕಲಾವಿದರಾದ ಶಂಕರ ಹೆಗಡೆ ನೀಲ್ಕೋಡ, ಸನ್ಮಯ ಭಟ್ ಮಲವಳ್ಳಿ, ಪ್ರಸನ್ನ ಭಟ್ ಬಾಳ್ಕಲ್, ರಾಘವೇಂದ್ರ ಹೆಗಡೆ ಯಲವಳ್ಳಿ ಹಾಗೂ ಗಣೇಶ ಗಾಂವಕರ ಕನಕನಹಳ್ಳಿ ಈಗಾಗಲೇ ಇಂಗ್ಲೆಂಡ್ ತಲುಪಿದ್ದಾರೆ. ಇಂಗ್ಲೆಂಡ್ ನಲ್ಲೇ ಇರುವ ಕಲಾವಿದರಾದ ಯೋಗೇಂದ್ರ ಮರವಂತೆ, ರಾಜೀವ ಹೆಗಡೆ, ಡಾ.ಗುರುಪ್ರಸಾದ ಯಕ್ಷಗಾನ ಪಾತ್ರ ನಿರ್ವಹಿಸಲಿದ್ದಾರೆ.

ಇಂಗ್ಲೆಂಡ್ ನ ವಿವಿಧೆಡೆ ಕಾಲಮಿತಿಯ 5 ಯಕ್ಷಗಾನ ಪ್ರದರ್ಶನ, ಒಂದು ಗಾನ, ನಾಟ್ಯ ವೈಭವ ನಡೆಯಲಿದೆ. ಜೂ.20ರಂದು ಬ್ಯಾಸಿಲ್ಡನ್ ನಲ್ಲಿ ಲಂಕಾದಹನ, 21ರಂದು ಕಾರ್ಡಿಫ್ ನಲ್ಲಿ ಜಾಂಬವತಿ ಕಲ್ಯಾಣ, 28ರಂದು ಡರ್ಬಿಯಲ್ಲಿ ಗದಾಯುದ್ಧ, 29ರಂದು ಮ್ಯಾಂಚೆಸ್ಟರ್ ನಲ್ಲಿ ಪಾಂಚಜನ್ಯ, ಜು.5ರಂದು ಬರ್ಮಿಂಗ್ ಹ್ಯಾಂ ಅಥವಾ ಸೋಲಿಹಲ್ ನಲ್ಲಿ ಭಸ್ಮಾಸುರ ಮೋಹಿನಿ, ಜು.6ರಂದು ಬ್ರಿಸ್ಟಲ್ ನಲ್ಲಿ ಗಾನ, ನಾಟ್ಯ ವೈಭವ ನಡೆಯಲಿದೆ.

ಈ ಹಿಂದೆ ಬ್ರಿಟನ್ ನಲ್ಲಿ ಕರಾವಳಿಯ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಿದ್ದರು. ಆದರೆ ಬಹುಕಾಲದ ತರುವಾಯ ಮತ್ತೆ ಇಂಗ್ಲೆಂಡಿನಲ್ಲಿ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಇಂಗ್ಲೆಂಡಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ತುಂಬ ಖುಷಿಯಾಗಿದೆ. ನಮ್ಮ ಹೆಮ್ಮೆಯ ಕಲೆಯನ್ನು ವಿದೇಶದಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸುತ್ತೇವೆ. ವಿದೇಶಿ ಪ್ರೇಕ್ಷಕರಿಗೂ ಯಕ್ಷಗಾನವನ್ನು ಪರಿಚಯಿಸಲು ನಾವು ಬಯಸುತ್ತೇವೆ ಎನ್ನುತ್ತಾರೆ ಯಕ್ಷಗಾನ ಕಲಾವಿದ, ಅಭಿನೇತ್ರಿ ಆರ್ಟ ಟ್ರಸ್ಟ್ ಮುಖ್ಯಸ್ಥ ಶಂಕರ ಹೆಗಡೆ ನೀಲ್ಕೋಡ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...