ಶಂಕರ ಕುದರಿಮನಿ
ಬಾದಾಮಿಯಿಂದ ಕೇವಲ 4 ಕಿ.ಮೀ ಅಂತರದಲ್ಲಿರುವ ಬನಶಂಕರಿ ದೇವಾಲಯ ಕರ್ನಾಟಕದಲ್ಲಿಯೇ ಸುಪ್ರಸಿದ್ಧ ದೇವಾಲಯ. ಇಂತಹ ಐತಿಹಾಸಿಕ ದೇವಿ ಜಾತ್ರಗೆ ಆಗಮಿಸುವ ಭಕ್ತರು ಅಷ್ಟೇ ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಜ.13 ಸೋಮವಾರ ಗೋಧೂಳಿ ಸಮಯದಲ್ಲಿ ಮಹಾರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಸಮರ್ಪಿಸುವದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. 17ರಂದು ಕಳಶಾರೋಹಣ ಜರುಗಲಿದೆ. ಅರ್ಚಕ ಪೂಜಾರ ಮನೆತನದವರು ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಇಂದಿನಿಂದ ಒಂದು ತಿಂಗಳ ಕಾಲ ಜರುಗುವ ಜಾತ್ರೆಯ ಸವಿಯೇ ವಿಶಿಷ್ಟವಾದುದು.ಹಿನ್ನೆಲೆ:
ದೇವಿ ಉಗ್ರ ರೂಪ ಶಾಂತಳಾಗಿಸಲು ದೇವತೆಗಳು ದೇವಿ ಭಕ್ತನಾದ ತ್ರಿದಂಡ ಮುನಿ ಬಳಿ ಬಂದರು. ಮುನಿಯ ಭಕ್ತಿಗೆ ಒಲಿದ ದೇವಿ, ಶಾಂತ ಸ್ವರೂಪಳಾಗಿ ಬನಶಂಕರಿಯಲ್ಲಿ ನೆಲೆ ನಿಂತಿರುವ ಬಗ್ಗೆ ಪುರಾಣದಲ್ಲಿ ತಿಳಿದು ಬರುತ್ತದೆ. ವನದಲ್ಲಿ ನೆಲೆ ನಿಂತಿದ್ದರಿಂದ ಮತ್ತು ಸರ್ವರಿಗೂ ಸಂತೋಷವನ್ನುಂಟು ಮಾಡಿದ್ದರಿಂದ ಬನಶಂಕರಿ ಎಂದು ಕರೆಯಿಸಿಕೊಂಡಳು. ಘೋರವಾದ ಬರಗಾಲ ನಿರ್ಮಿತವಾದಾಗ ತನ್ನ ದೇಹದಿಂದಲೇ ಶಾಖ (ತರಕಾರಿ)ಗಳನ್ನು ಉತ್ಪನ್ನ ಮಾಡಿ ಜನರನ್ನು ಸಲಹಿದ್ದರಿಂದ ಶಾಖಾಂಬರಿ ಎಂತಲೂ ಪ್ರಸಿದ್ಧಿಯಾದಳು.
ಬನಶಂಕರಿ ಜಾತ್ರೆಯು ನೂರಾರು ಕಲಾವಿದರು ಮತ್ತು ಸಾವಿರಾರು ವ್ಯಾಪಾರಸ್ಥರಿಗೆ ಆರ್ಥಿಕ ಶಕ್ತಿ ಒದಗಿಸಿ ಮುಂದಿನ ಜೀವನಕ್ಕೆ ಭದ್ರತೆ ನೀಡುತ್ತದೆ. ಈ ಜಾತ್ರೆಯೊಂದರಲ್ಲಿಯೇ ಎಲ್ಲ ಮೂಲಗಳಿಂದ ಕೋಟ್ಯಂತರ ರುಪಾಯಿ ವ್ಯಾಪಾರ ವಹಿವಾಟು ನಡೆದ ಬೃಹತ್ ಜಾತ್ರೆಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ಭಕ್ತಿ-ಭಾವಗಳ ಸಂಗಮದ ಜೊತೆಗೆ ಮನರಂಜನೆಗೂ ಇಲ್ಲಿ ಹೆಚ್ಚಿನ ಅವಕಾಶ ಉಂಟು. ಈ ಎರಡರಿಂದಾಗಿ ಎಲ್ಲ ವಯೋಮಾನದ ಜನರನ್ನು ತನ್ನತ್ತ ಸೆಳೆದುಕೊಂಡು ರಾಜ್ಯದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ ಈ ಜಾತ್ರೆ.
ಕೋಟ್ಯಾಧಿ ಭಕ್ತರ ಆರಾಧ್ಯ ದೇವತೆ ಬನಶಂಕರಿ ರಥೋತ್ಸವಕ್ಕೆ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಳಿಬಂಡಿಮೂಲಕ ತಲತಲಾಂತರದಿಂದ ಗೌಡರ ಮನೆತನದಿಂದ ಹಗ್ಗದೊಂದಿಗೆ ಮಹಾರಥೋತ್ಸವಕ್ಕೆ ಆಗಮಿಸುತ್ತಾರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪೂಜಾ ಕೈಂಕರ್ಯಗಳನ್ನು ಪೂಜಾರ ಮನೆತನದವರಿಂದ ನೇರವೆರಲಿದೆ.
ಹಿಂದೊಮ್ಮೆ ನಾಟಕ ರತ್ನ ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಕಂದಗಲ್ಲ ಹಣಮಂತರಾಯ, ಚಿತ್ತರಗಿ ಗಂಗಾಧರ ಶಾಸ್ತ್ರಿ, ಡಾ:ರಾಜಕುಮಾರ ಹಾಸ್ಯ ಕಲಾವಿದ ನರಸಿಂಹರಾಜು, ಸೇರಿದಂತೆ ಮುಂತಾದವರು ಈ ಜಾತ್ರೆಯಲ್ಲಿ ಬಂದು ನಾಟಕವನ್ನಾಡಿ ಹೋಗಿರುವುದು ಒಂದು ವಿಶೇಷ. ಇವರ ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳನ್ನು ಹಿರಿಯರು ಇಂದಿಗೂ ಮೆಲಕು ಹಾಕುತ್ತಾರೆ.
ಭಕ್ತರಿಗೆ ವಿವಿಧ ಮೂಲಸೌಕರ್ಯ:
ಮಹಿಳೆಯರ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನ ಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ನೀರಿನ ವ್ಯವಸ್ಥೆಗಾಗಿ ಬೋರವೆಲ್ ಕೊರೆಯಿಸಿ ಪೈಪಲೈನ್ ಅಳವಡಿಸಲಾಗಿದೆ. ಇದರ ಪಕ್ಕದಲ್ಲಿಯೇ ಮೂರು ಎಕರೆ ಜಾಗೆ ಖರೀದಿಸಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಭಕ್ತಾಧಿಗಳಿಗೆ ನಿತ್ಯ ಅನ್ನದಾನದ ದಾಸಹೋ ಜರಗುತ್ತದೆ. ಇದಕ್ಕಾಗಿ ಲಕ್ಷಾಂತರ ರು. ವೆಚ್ಚದಲ್ಲಿ ಆಹಾರ ತಯಾರಿಸುವ ಆಧುನಿಕ ಯಂತ್ರಗಳ ಮೂಲಕ ಭಕ್ತಾಧಿಗಳ ಅನಕೂಲಕ್ಕೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುವ ವಿಶ್ವಾಸವನ್ನು ಕಮಿಟಿ ವ್ಯಕ್ತಪಡಿಸಿದೆ.