ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ದಿ.ಚಂದ್ರಶೇಖರ್ ಮತ್ತು ರಾಮಲಿಂಗಯ್ಯ ಸ್ಮರಣಾರ್ಥ ಆಯೋಜಿಸಿದ್ದ ಪುರುಷರ ಅಹ್ವಾನಿತ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸ್ಕಲ್ವಿ ಆಸ್ಟ್ರ ತಂಡ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿತು.ನಾಲ್ವಡಿ ಕೃಷ್ಣ ಒಡೆಯರ್ ಬ್ಯಾಡ್ಮಿಂಟನ್ ಕ್ಲಬ್ ಪಾಂಡವಾಸ್ ವತಿಯಿಂದ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ರಾಜ್ಯದ ಮಂಗಳೂರು, ಶಿವಮೊಗ್ಗ, ಬೆಂಗಳೂರು, ದಕ್ಷಿಣ ಕನ್ನಡ, ಭದ್ರವತಿ, ಮೈಸೂರು, ಹಾಸನ, ದಾವಣಗೆರೆ, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಸೇರಿದಂತೆ ರಾಜ್ಯದ ಜಿಲ್ಲೆಗಳಿಂದ 32 ತಂಡಗಳು ಭಾಗವಹಿಸಿ ಬಹುಮಾನಕ್ಕಾಗಿ ಸೆಣಸಾಡಿದವು.
ಅಂತಿಮವಾಗಿ ಬೆಂಗಳೂರಿನ ಸ್ಕಲ್ವಿ ಆಸ್ಟ್ರ ತಂಡ ಮತ್ತು ಮಂಗಳೂರಿನ ಆಳ್ವಾಸ್ ತಂಡ ಪೈನಲ್ ಪ್ರವೇಶಿಸಿದವು. ಎರಡು ತಂಡಗಳ ರೋಚಕ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸ್ಕಲ್ವಿ ಆಸ್ಟ್ರ ತಂಡ ಮಂಗಳೂರಿನ ಆಳ್ವಾಸ್ ತಂಡವನ್ನು 35-22, 35-21 ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಮಂಗಳೂರಿನ ಆಳ್ವಾಸ್ ತಂಡ ಎರಡನೇ ಬಹುಮಾನಕ್ಕೆ ತೃಪ್ತಿಪಟ್ಟಿತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಸೆಣಸಾಟದಲ್ಲಿ ಬೆಂಗಳೂರಿನ ಚಿನ್ಮಯಿ ಸ್ಪೋರ್ಟ್ಸ್ ಕ್ಲಬ್ ಮೂರನೇ ಸ್ಥಾನ, ಮೈಸೂರಿನ ಅಂಬಾರಿ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಜೆಡಿಎಸ್ ಯುವ ಮುಖಂಡರಾದ ಎಚ್.ಸಿ.ಕೃಷ್ಣೇಗೌಡ (ಪಟೇಲ), ಪಿಎಸಿಎಸ್ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್, ಪುರಸಭೆ ಮಾಜಿಸದಸ್ಯ ಶಿವಕುಮಾರ್, ವೆಂಕಟೇಶ್, ಮಹದೇಸ್ವಾಮಿ ನೇತೃತ್ವದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.ಪಂದ್ಯಾವಳಿಯಲ್ಲಿ ಬೆಂಗಳೂರಿನ ಸ್ಕಲ್ವಿ ಆಸ್ಟ್ರ ತಂಡದ ಆಟಗಾರರಾದ ಕಿರಣ್ ಕುಮಾರ್ ಉತ್ತಮ ಹಿಂಬದಿ ಆಟಗಾರ, ರವಿಕುಮಾರ್ ಅವರು ಉತ್ತಮ ಮುಂಬದಿ ಆಟಗಾರ ಹಾಗೂ ಮಂಗಳೂರಿನ ಆಳ್ವಾಸ್ ತಂಡದ ಆಟಗಾರ ಚೇತನ್ ಅವರು ಉತ್ತಮ ಸೆಂಟರ್ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ವಿಜೇತರಿಗೆ ಬಹುಮಾನ ವಿತರಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಂದ್ಯಾವಳಿ ಆಯೋಜಿಸಿದ ಆಯೋಜಕರು ಪಂದ್ಯಗಳನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದಾರೆ. ಆಟಗಾರರು ಕೂಡ ತಮ್ಮ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಮುಂದಿನ ವರ್ಷಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಪಂದ್ಯಾವಳಿ ಆಯೋಜಿಸಲು ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.