ಕನ್ನಡಪ್ರಭ ವಾರ್ತೆ, ದಾವಣಗೆರೆ
ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರುಹರಿಸಿ, 4 ದಿನಗಳೇ ಕಳೆದರೂ ದಾವಣಗೆರೆ ತಾಲೂಕಿನ ಭಾಗಕ್ಕೆ ಇಂದಿಗೂ ನೀರು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕುಂದುವಾಡ ಗ್ರಾಮದ ಬಳಿ ಭದ್ರಾ ಕಾಲುವೆಗೆ ಇಳಿದು ರೈತರು ಪ್ರತಿಭಟನೆ ನಡೆಸಿದರು.ರೈತ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಕುಂದುವಾಡದ ಭದ್ರಾ ಕಾಲುವೆಗೆ ಇಳಿದ ರೈತರು ಭದ್ರಾ ಅಚ್ಚುಕಟ್ಟು ಭಾಗಕ್ಕೆ, ಅದರಲ್ಲೂ ಕೊನೆಯ ಭಾಗಕ್ಕೆ ಈವರೆಗೆ ಭದ್ರೆ ನೀರು ತಲುಪದ ಹಿನ್ನೆಲೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಂ.ಸತೀಶ ಮಾತನಾಡಿ, ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಕೈಗೊಂಡ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ನಾಲೆಗೆ ನೀರು ಬಿಟ್ಟು ನಾಲ್ಕು ದಿನಗಳೇ ಕಳೆದರೂ ಈವರೆಗೂ ಕೊನೆ ಭಾಗಕ್ಕೆ ನೀರು ಬಂದಿಲ್ಲ. ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಭದ್ರಾ ಅಚ್ಚುಕಟ್ಟು ರೈತರು ಇಂತಹ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ತೀವ್ರ ಜಲ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು.ಅವೈಜ್ಞಾನಿಕ ವೇಳಾಪಟ್ಟಿ:
ಐಸಿಸಿ ಸಭೆಯಲ್ಲಿ ದಾವಣಗೆರೆ ಜಿಲ್ಲೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭಾಗವಹಿಸಿ, ಜಿಲ್ಲೆಗೆ ಸಿಗಬೇಕಾದ ನೀರನ್ನು ಕೊಡಿಸುವ ಕೆಲಸ ಮಾಡಬೇಕಿತ್ತು. ಭದ್ರಾ ಡ್ಯಾಂ ನೀರು ಆಶ್ರಯಿಸಿದ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿರುವ ಜಿಲ್ಲೆ ನಮ್ಮದು. ಈ ಎಲ್ಲ ವಿವರ ನೀಡಿ, ಅಂಕಿ ಅಂಶಗಳ ಸಮೇತ ವಾದ ಮಂಡಿಸಿ, ನೀರು ಹರಿಸುವ ಪ್ರಮಾಣ ಮತ್ತು ಅವಧಿಯನ್ನು ಲೆಕ್ಕಾಚಾರದಂತೆ ವೇಳಾಪಟ್ಟಿ ನಿಗದಿಪಡಿಸಬೇಕಿತ್ತು. ಆದರೆ, ಅಂತಹ ಕೆಲಸ ಮಾಡಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು.ಸಚಿವರ ನಿರ್ಲಕ್ಷ್ಯ ಮತ್ತು ರೈತವಿರೋಧಿ ಧೋರಣೆಯಿಂದಾಗಿ ಐಸಿಸಿ ಸಭೆಗೆ ಗೈರು ಹಾಜರಾಗಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರಕ್ಕೆ ಕಾರಣವಾಗಿದ್ದಾರೆ. ನಾಲೆಗೆ ನೀರು ಬಿಟ್ಟು, 4 ದಿನವಾದರೂ ದಾವಣಗೆರೆ ತಾಲೂಕಿನ ಭಾಗಕ್ಕೆ ನೀರು ಬಂದಿಲ್ಲ. ಹೀಗಾದರೆ ಅಚ್ಚುಕಟ್ಟಿನ ರೈತರು ಬದುಕುವುದಾದರೂ ಹೇಗೆ? ಭೀಕರ ಬರದಿಂದಾಗಿ ರೈತರು ತತ್ತರಿಸಿದ್ದು, ನಾಲೆಗೆ ನೀರು ಹರಿಸಿದರೆ ಒಂದಿಷ್ಟು ರೈತರಿಗೆ ಅನುಕೂಲವಾದರೂ ಆಗುತ್ತಿತ್ತು. ಆಳುವ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು.
ತೋಟದ ಬೆಳೆಗಳಿಗೆ ನೀರಿಲ್ಲ:ರೈತ ಮುಖಂಡ ಕುಂದುವಾಡದ ಜಿಮ್ಮಿ ಹನುಮಂತಪ್ಪ ಮಾತನಾಡಿ, 10-20 ವರ್ಷಗಳಿಂದ ಕಷ್ಟಪಟ್ಟು ಬೆವರು, ಹರಿಸಿ ಮಾಡಿದ ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನಾವು ರೈತರು ಅನ್ನ ಕೊಡುವವವರೇ ಹೊರತು, ಕನ್ನ ಹಾಕುವವರಲ್ಲ. ಸರ್ಕಾರವು ನೀರಿಲ್ಲದೇ ಕಂಗಾಲಾಗಿರುವ ನಮ್ಮ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಮೊದಲು ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡಲಿ. ಜಿಲ್ಲಾಡಳಿತ, ನೀರಾವರಿ ಇಲಾಖೆ ಏನು ಮಾಡುತ್ತಿವೆ ಎಂದು ಹರಿಹಾಯ್ದರು.
ಯುವ ರೈತ ಕುಂದುವಾಡ ಪುನೀತ್ ಮಾತನಾಡಿ, ಭದ್ರಾ ನೀರು ಬಾರದೇ, ತೋಟದ ಬೆಳೆಗಳು ಒಣಗುತ್ತಿವೆ. ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.ರೈತ ಮುಖಂಡರಾದ ಬೆಳವನೂರು ನಾಗೇಶ್ವರ ರಾವ್, ಮಾಜಿ ಮೇಯರ್ ಎಚ್.ಎನ್. ಗುರುನಾಥ, ಮುಖಂಡರಾದ ಭಾಸ್ಕರ ರೆಡ್ಡಿ, ಅಣ್ಣಪ್ಪ, ಬಿ.ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣ ಹರಿಹರ, ಎಚ್.ಎನ್. ಮಹಾಂತೇಶ, ಎಚ್.ಎಸ್. ಸೋಮಶೇಖರ, ಕ್ಯಾಂಪ್ ನಾಗೇಶ್ವರ ರಾವ್, ರಾಮಕೃಷ್ಣಪ್ಪ ಇತರರು ಇದ್ದರು.
- - -ಬಾಕ್ಸ್ ಸಚಿವರ ನಿರ್ಲಕ್ಷ್ಯದಿಂದ ಆತ್ಮಹತ್ಯೆ ಪರಿಸ್ಥಿತಿಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಕುಂದುವಾಡ ಮಾತನಾಡಿ, ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಂದಿಲ್ಲ. ದನ- ಕರುಗಳಿಗೆ ನೀವು, ಮೇವು ಸಹ ಇಲ್ಲದ ಸ್ಥಿತಿ ಇದೆ. ಮೇವು ಇಲ್ಲದ ಕಾರಣಕ್ಕೆ ದನ- ಕರುಗಳನ್ನು ಕೇಳಿದ ದರಕ್ಕೆ ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದೇವೆ. ನಮ್ಮ ಜಿಲ್ಲಾ ಸಚಿವರ ನಿರ್ಲಕ್ಷ್ಯದಿಂದಾಗಿ ರೈತರು ನೀರಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರವು ರೈತರ ಬದುಕಿನೊಂದಿಗೆ ಚೆಲ್ಲಾಟ ಸರಿಯಲ್ಲ ಎಂದು ಎಚ್ಚರಿಸಿದರು.
- - --24ಕೆಡಿವಿಜಿ1, 2:
ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಟ್ಟು 4 ದಿನ ಕಳೆದರೂ ದಾವಣಗೆರೆ ತಾಲೂಕಿನ ಕುಂದುವಾಡ ಭಾಗಕ್ಕೆ ನೀರು ಬಾರದ್ದನ್ನು ಖಂಡಿಸಿ ಭಾನುವಾರ ರೈತರು ನಾಲೆಗೆ ಇಳಿದು ಪ್ರತಿಭಟಿಸಿದರು.