ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿ ಯೋಧ ಮಹೇಶ ನಾಗಪ್ಪ ಮರಿಗೊಂಡ ಅವರ ಅಂತ್ಯಕ್ರಿಯೆ ಗುರುವಾರ ನೆರವೇರಿತು.ಮಧ್ಯಾಹ್ನ 12.40ರ ಸುಮಾರಿಗೆ ಬೆಳಗಾವಿ ಮೂಲಕ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಮೆರವಣಿಗೆ ನಡೆಸಿ ಕೆಂಗೇರಿಮಡ್ಡಿಯ ಸರ್ಕಾರಿ ಜಾಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯ ಜನರು ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಯೋಧನ ಪತ್ನಿ ಲಕ್ಷ್ಮಿ, ತಾಯಿ ಶಾರದಾ, ತಮ್ಮ ಸಂತೋಷ, ತಂಗಿ ವಿದ್ಯಾಶ್ರೀ ಆಕ್ರಂದನ ಮುಗಿಲುಮುಟ್ಟಿತ್ತು. ಸುತ್ತಮುತ್ತಲಿನ ಮಾಜಿ ಸೈನಿಕ ಸಂಘಟನೆ ಸದಸ್ಯರು ಅಂತಿಮ ನಮನ ಸಲ್ಲಿಸಿದರು.ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಮಹಾತ್ಮಾ ಗಾಂಧಿ ಕ್ರೀಡಾಂಗಣದಿಂದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ್, ನಡುಚೌಕಿ, ಡಬಲ್ ರಸ್ತೆ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಭಗೀರಥ ವೃತ್ತದ ಮೂಲಕ ಹಾಯ್ದು ಕೆಂಗೇರಿಮಡ್ಡಿವರೆಗೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಜನರು ಜಯಘೋಷಣೆಗಳನ್ನು ಮೊಳಗಿಸಿದರು. ಕೆಂಗೇರಿಮಡ್ಡಿಯ ಸರ್ಕಾರಿ ಜಾಗದಲ್ಲಿ ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದರು. ನಂತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಸಾವಿರಾರು ಅಭಿಮಾನಿಗಳು ಅವರ ಅಂತ್ಯಸಂಸ್ಕಾರದ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಂಡರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಗಿರೀಶ ಸ್ವಾದಿ, ಸಿಪಿಐ ಸಂಜೀವ ಬಳೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.