ಕನ್ನಡಪ್ರಭ ವಾರ್ತೆ ತಿಪಟೂರು
ಬಗರ್ ಹುಕುಂ ಸಮಸ್ಯೆ ಸೇರಿದಂತೆ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಸಾಗುವಳಿ ಚೀಟಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪ್ರಾಂತ ರೈತ ಸಂಘ ಹಾಗೂ ರಾಜ್ಯ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಗರದ ತಾಲೂಕು ಆಡಳಿತ ಸೌಧದ ಮುಂದೆ ಫೆ.24ರ ಸೋಮವಾರ ಬೆಳಗ್ಗೆ 11ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ತಿಳಿಸಿದರು.ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್‌ನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್‌ಹುಕುಂ ಸಾಗುವಳಿದಾರರು ಭಯದಲ್ಲಿ ಬದುಕುವಂಥ ಪರಿಸ್ಥಿತಿ ಬಂದಿದೆ. ಸರ್ಕಾರಗಳ ಆದೇಶಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ದಾಳಿ, ನೋಟಿಸ್‌ಗಳು ರೈತರ ಬದುಕಿನ ನೆಲೆಯನ್ನೇ ನಿರ್ನಾಮ ಮಾಡುತ್ತಿವೆ. ನಾವು ಕಳೆದ ವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟ ಮುಷ್ಕರದಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇವೆಂದು ಸಮಯ ಕೇಳಿ ಈಗ ಕೊಟ್ಟ ಸಮಯ ಮುಗಿದಿದ್ದು, ನಮ್ಮ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಜನರಿಂದ ಆಯ್ಕೆಯಾದ ಶಾಸಕರು ಈ ಬಗ್ಗೆ ಸದನದಲ್ಲಿ ಮಾತನಾಡಿ ಬಗರ್‌ಹುಕುಂ ರೈತರಿಗೆ ನ್ಯಾಯ ದೊರಸಿಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ರಾಜ್ಯದಲ್ಲಿ ಬಗರ್‌ಹುಕುಂ ರೈತರ 12 ಲಕ್ಷ ಅರ್ಜಿಗಳನ್ನು ಏಕಾಏಕಿ ವಜಾಗೊಳಿಸಲಾಗಿದ್ದು, ನಮ್ಮ ತಾಲೂಕಿನಲ್ಲಿ ಒಟ್ಟು 7 ಸಾವಿರ ಬಗರ್‌ಹುಕುಂ ರೈತರಿದ್ದು ಅದರಲ್ಲಿ ಒಂದು ಸಾವಿರ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಸರ್ಕಾರ ಗೋಮಾಳ, ಅರಣ್ಯ ಮುಂತಾದ ಕುಂಟು ನೆಪ ನೀಡಿ ರೈತರ ಅರ್ಜಿ ತಿರಸ್ಕರಿಸುತ್ತಿದ್ದು, ಅರಣ್ಯ ಹಾಗೂ ಗೋಮಾಳ ಜಮೀನುಗಳನ್ನು ಬಂಡವಾಳದಾರರಿಗೆ ನೀಡುತ್ತಾ ಜನವಿರೋಧಿ ಕೆಲಸ ಮಾಡುತ್ತಿದೆ. ಚುನಾವಣೆಗೂ ಮುನ್ನ ಈ ಬಗ್ಗೆ ಸಿದ್ದರಾಮಯ್ಯ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಬೇಕು ಹಾಗೂ ಸ್ಥಳೀಯ ಶಾಸಕರೂ ಈ ಬಗ್ಗೆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸಮರ್ಪಕ ವಿದ್ಯುತ್ ಕೊಡಿ:ಬೆಸ್ಕಾಂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಇರುವುದಿಲ್ಲ. ಪರೀಕ್ಷೆಗಳು ಸಮೀಪಿಸುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮೊದಲಿದ್ದಂತೆ ಸಮರ್ಪಕ ವಿದ್ಯುತ್ ನೀಡಬೇಕು. ರೈತರ ಪರಿವರ್ತಕಗಳು ಸುಟ್ಟುಹೋದರೆ ರೈತರು 2-3 ಲಕ್ಷ ರು. ಖರ್ಚು ಮಾಡುವಂತಾಗಿದ್ದು ಅಕ್ರಮ ಸಕ್ರಮದಡಿ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ನೀಡಬೇಕು. ರೈತರು ಬೆಳೆದ ಬೆಳೆಗೆ ಎಂಎಸ್‌ಪಿ ದರ ನಿಗದಿ ಮಾಡಬೇಕು. ಕೂಡಲೇ ಸ್ವಾಮಿನಾಥನ್ ವರದಿ ಜಾರಿ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಹಮ್ಮಿಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಹಸಿರು ಸೇನೆ, ರೈತ ಸಂಘ, ಬೆಲೆಕಾವಲು ಸಮಿತಿ, ದಲಿತ ಸಂಘಟನೆಗಳು, ಪ್ರಗತಿಪರ ಎಲ್ಲಾ ಸಂಘಟನೆಗಳು ಸೇರಿ ಒಂದು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಯ ಮಂಜುನಾಥ್, ಕೊಟ್ಟೂರಪ್ಪ, ರಾಜಮ್ಮ, ಸುಧಾಕರ್, ಸಿದ್ದಪ್ಪ, ತ್ಯಾಗರಾಜು, ಶಂಕರಲಿಂಗಪ್ಪ ಮತ್ತಿತರರಿದ್ದರು.