ಕನ್ನಡಪ್ರಭ ವಾರ್ತೆ ಮಂಡ್ಯ
ವಕ್ಫ್ ಕಾಯಿದೆ ವಿರೋಧಿಸಿ ವಕ್ಫ್ ವಿರೋಧಿ ರೈತ ಒಕ್ಕೂಟದ ವತಿಯಿಂದ ಡಿ.9 ರಂದು ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದು, ಬಳಿಕ ಡೀಸಿ ಕಚೇರಿ ಬಳಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ವಕ್ಫ್ ಕಾಯ್ದೆ ಬಡವ, ಮಾನವೀಯ, ದೇಶ ಹಾಗೂ ಸಂವಿಧಾನ ವಿರೋಧಿಯಾಗಿದೆ. 1913ರಲ್ಲಿ ಬ್ರಿಟಿಷರಿಂದ ರಚನೆಯಾದ ಮುಸಲ್ಮಾನ ಮಂಡಳಿಯು 1923ರಲ್ಲಿ ವಕ್ಫ್ ಮಂಡಳಿಯಾಗಿ ರೂಪಾಂತರಗೊಂಡಿದೆ. ಇದರ ವಿರುದ್ಧ ಲಂಡನ್‌ನ ಸುಪ್ರೀಂ ನ್ಯಾಯಾಲಯದಲ್ಲಿ ಕೆಲವು ಬ್ರಿಟಿಷರೇ ದಾವೆ ಹೂಡಿದ್ದರಿಂದ ಲಂಡನ್‌ನ ಸುಪ್ರೀಂ ನ್ಯಾಯಾಲಯ ವಕ್ಫ್ ಸಾರ್ವಕಾಲಿಕ ಗಂಡಾಂತರವಾಗಿದೆ. ಇದರ ಅಧಿಕಾರವನ್ನು ಮೊಟಕುಗೊಳಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದರು.ಆಸ್ತಿ ಅಥವಾ ಯಾವುದೇ ರೀತಿಯ ನ್ಯಾಯಕ್ಕಾಗಿ ನ್ಯಾಯಾಲಯಗಳ ಕಡೆಗೆ ಮುಖ ಮಾಡುವುದುಂಟು. ಆದರೆ, ವಕ್ಫ್ ಸಂಬಂಧ ಜಮೀನಿನ ವ್ಯಾಜ್ಯಕ್ಕೆ ಸಂವಿಧಾನ ಬದ್ಧವಾಗಿ ನ್ಯಾಯಾಲಯಗಳ ಮುಂದೆ ಹಾಜರಾಗುವ ಹಕ್ಕನ್ನು ಕಸಿಯುವ ಕೆಲಸವನ್ನು 2013ರಲ್ಲಿ ಅಂದಿನ ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ವಕ್ಫ್ ನಿಂದ ರೈತರ ಕೃಷಿ ಭೂಮಿ, ಸ್ಮಶಾನ, ಸರ್ಕಾರಿ ಆಸ್ತಿ, ಮಠ- ಮಂದಿರಗಳು ಹಾಗೂ ಸಾರ್ವಜನಿಕ ಆಸ್ತಿಯನ್ನು ದೇಶಾದ್ಯಂತ ಕಬಳಿಸಲಾಗುತ್ತಿದ್ದು, ವಕ್ಫ್ ನ ಕಾಯ್ದೆಗೆ ತಿದ್ದುಪಡಿ ತಂದು ರೈತ, ಸಾರ್ವಜನಿಕ, ಮಠ- ಮಂದಿರ ಹಾಗೂ ಸರ್ಕಾರಿ ಆಸ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಸದರಿ ಸಮಸ್ಯೆ ಉಂಟಾಗಲು 2013ರಲ್ಲಿ ಅಂದಿನ ಕೇಂದ್ರ ಸರ್ಕಾರ ತಿದ್ದುಪಡಿ ತಂದು ವಕ್ಫ್ ಮಂಡಳಿಗೆ ಮಿತಿಮೀರಿದ ಅಧಿಕಾರ ನೀಡಿರುವುದರಿಂದಾಗಿ 8000 ಎಕರೆಯಷ್ಟಿದ್ದ ವಕ್ಫ್ ಭೂಮಿ ಇಂದು 9.40 ಲಕ್ಷ ಎಕರೆಗೂ ಹೆಚ್ಚು ವಿಸ್ತಾರವಾಗಿದೆ. ಅಕ್ರಮವಾಗಿ ಆಸ್ತಿ ಹೆಚ್ಚಿಸಿಕೊಳ್ಳುತ್ತಿರುವ ವಕ್ಫ್ ಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕನ್ನಡಿಗರ ಭಾವನಾತ್ಮಕ ಸಂಬಂಧಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಒಂದು ವರ್ಗದ ಪರವಾಗಿ ಮತ್ತೊಂದು ವರ್ಗದವರಿಗೆ ಅನ್ಯಾಯ ಮಾಡುತ್ತಿದೆ. ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕ ಶಾಂತಿಯ ತೋಟವಾಗಬೇಕು. ಅದು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ಧಿಗೋಷ್ಠಿಯಲ್ಲಿ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಮುಖಂಡರಾದ ಬಿ.ಪಿ. ಅಪ್ಪಾಜಿ, ಉಮ್ಮಡಹಳ್ಳಿ ಉಮೇಶ್, ಪಣಕನಹಳ್ಳಿ ವೆಂಕಟೇಶ್, ಪ್ರಕಾಶ್, ಮೋಹನ್ ಚಿಕ್ಕಮಂಡ್ಯ ಇದ್ದರು.