ಹಾಸನ: ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆದಿಚುಂಚನಗಿರಿ ಆಸ್ಪತ್ರೆಯ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಜ.೨೦ರ ಮಂಗಳವಾರ ಬೆಳಗ್ಗೆ ೯ ರಿಂದ ಸಂಜೆ ೪ ರವರೆಗೆ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.ನಗರದ ಶ್ರೀ ಆದಿಚುಂಚನಗಿರಿ ಮಠದ ಸಮುದಾಯಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಶಿಬಿರವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ (ಹಾಸನ ಮತ್ತು ಕೊಡಗು), ರೋಟರಿ ಕ್ಲಬ್ ಆಫ್ ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಜಿಲ್ಲಾ ವೈದ್ಯಕೀಯ ವ್ಯಾಪಾರಿಗಳು ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಬೆಂಗಳೂರು, ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ನಿಮ್ಹಾನ್ಸ್, ಮಿಂಟೋ ಕಣ್ಣಿನ ಆಸ್ಪತ್ರೆ, ಯನಪೋಯ ಆಸ್ಪತ್ರೆ ಮಂಗಳೂರು, ಬಿಜಿಎಸ್ ಅಪೋಲೋ ಆಸ್ಪತ್ರೆ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಆಸ್ಪತ್ರೆಗಳು ಈ ಶಿಬಿರಕ್ಕೆ ಕೈಜೋಡಿಸಿವೆ ಎಂದರು.
ಶಿಬಿರಕ್ಕೆ ಆಗಮಿಸುವವರು ತಮ್ಮ ಕಾಯಿಲೆಗೆ ಸಂಬಂಧಿಸಿದ ಹಳೆಯ ವೈದ್ಯಕೀಯ ದಾಖಲೆಗಳನ್ನು ಜೊತೆಯಲ್ಲಿ ತರಬೇಕೆಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೪೪೮೫೮೧೭೩೦, ೯೮೪೪೨೭೯೮೧೮, ೮೧೦೫೫೯೭೨೦೦, ೭೨೦೪೨೪೭೭೦೩ ಸಂಖ್ಯೆಗಳ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.